'ಮುಸ್ಲಿಂ ಪ್ರಾಬಲ್ಯದ ಆರು ದೇಶಗಳ ಮೇಲೆ ಬಾಂಬ್ ಹಾಕಿದ ವ್ಯಕ್ತಿ...': ಒಬಾಮಾ ವಿರುದ್ಧ ಸೀತಾರಾಮನ್ ಕಿಡಿ

ಬಿಜೆಪಿ ಸರ್ಕಾರ ಭಾರತೀಯ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...
ನಿರ್ಮಲಾ ಸೀತಾರಾಮನ್ - ಒಬಾಮಾ
ನಿರ್ಮಲಾ ಸೀತಾರಾಮನ್ - ಒಬಾಮಾ

ನವದೆಹಲಿ: ಬಿಜೆಪಿ ಸರ್ಕಾರ ಭಾರತೀಯ ಮುಸ್ಲಿಮರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ಮಾತನಾಡಿದ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಅವರ ಆಳ್ವಿಕೆಯಲ್ಲಿ ಅಮೆರಿಕ ಆರು ಮುಸ್ಲಿಂ ಪ್ರಾಬಲ್ಯದ ದೇಶಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಿರುಗೇಟು ನೀಡಿದ್ದಾರೆ.

ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, “ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ಭಾರತೀಯ ಮುಸ್ಲಿಮರ ವಿಷಯವನ್ನು ಪ್ರಸ್ತಾಪಿಸಲು ಬಯಸುತ್ತಿರುವುದಾಗಿ ಹೇಳಿದ ಅಮೆರಿಕದ ಮಾಜಿ ಅಧ್ಯಕ್ಷ(ಬರಾಕ್ ಒಬಾಮ) ಹೇಳಿಕೆಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ನಾವು ಅಮೆರಿಕದೊಂದಿಗೆ ಉತ್ತಮ ಸ್ನೇಹವನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ.

ಭಾರತದ ಧಾರ್ಮಿಕ ಸಹಿಷ್ಣುತೆಯ ಬಗ್ಗೆ ಮಾತನಾಡುತ್ತಿರುವ ಇದೇ ವ್ಯಕ್ತಿ(ಒಬಾಮಾ) ಅಧಿಕಾರದಲ್ಲಿದ್ದಾಗ 6 ಮುಸ್ಲಿಂ ಪ್ರಾಬಲ್ಯದ ದೇಶಗಳು ಬಾಂಬ್ ದಾಳಿ ನಡೆಸಲಾಗಿದೆ. ಜನ ಅವರ ಆರೋಪಗಳನ್ನು ಹೇಗೆ ನಂಬುತ್ತಾರೆ? ಎಂದು  ಸೀತಾರಾಮನ್ ಪ್ರಶ್ನಿಸಿದ್ದಾರೆ.

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಾಧ್ಯಮ ಸಂದರ್ಶನದಲ್ಲಿ ಭಾರತದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸದಿದ್ದರೆ, ದೇಶವು "ಕೆಲವು ಹಂತದಲ್ಲಿ ಇಬ್ಭಾಗವಾಗಲು ಪ್ರಾರಂಭವಾಗುವ ಬಲವಾದ ಸಾಧ್ಯತೆ ಇದೆ" ಎಂದು ಹೇಳಿದ ನಂತರ ಸೀತಾರಾಮನ್ ಅವರು ಈ ಹೇಳಿಕೆ ನೀಡಿದ್ದಾರೆ.

ಮೋದಿ ಸರ್ಕಾರವು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅನ್ನೋ ತತ್ವದ ಅಡಿ ಕಾರ್ಯ ನಿರ್ವಹಿಸುತ್ತಿದೆ. ಯಾವುದೇ ಜಾತಿ, ಧರ್ಮ, ಸಮುದಾಯದ ಆಧಾರದ ಮೇಲೆ ತಾರತಮ್ಯ ಮಾಡೋದಿಲ್ಲ ಎಂದು ಪ್ರಧಾನಿ ಮೋದಿ ಅವರು ಅಮೆರಿಕದಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ವಿರೋಧ ಪಕ್ಷಗಳು ಮಾತ್ರ ಚರ್ಚೆಯ ವೇಳೆ ವಿವಾದ ಅಲ್ಲದ ವಿಚಾರವನ್ನು ವಿವಾದ ಮಾಡುತ್ತಾರೆ ಎಂದು ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ಮೋದಿ ಅವರು ಈ ದೇಶದ ಪ್ರಧಾನಿ ಪಟ್ಟಕ್ಕೆ ಏರಿದ ಬಳಿಕ 13 ಪ್ರಶಸ್ತಿಗಳು ಸಿಕ್ಕಿವೆ. ಈ ಪೈಕಿ 6 ಪ್ರಶಸ್ತಿಗಳನ್ನು ಮುಸ್ಲಿಂ ಪ್ರಾಬಲ್ಯದ ದೇಶಗಳೇ ನೀಡಿವೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com