ರಸ್ತೆ ಅಪಘಾತ ಪ್ರಕರಣದ ಅಪರಾಧಿಗೆ ದಿನಕ್ಕೆ 5 ಬಾರಿ ನಮಾಜ್, 2 ಗಿಡ ನೆಡುವುದೇ ಶಿಕ್ಷೆ: ಕೋರ್ಟ್ ಆದೇಶ

ರಸ್ತೆ ಅಪಘಾತ ಪ್ರಕರಣದಲ್ಲಿನ ಗಲಾಟೆ ಪ್ರಕರಣದ ಅಪರಾಧಿಯೊಬ್ಬನಿಗೆ ದಿನಕ್ಕೆ 5 ಬಾರಿ ನಮಾಜ್ ಮಾಡುವುದು ಹಾಗೂ 2 ಗಿಡಗಳನ್ನು ನೆಡುವುದೇ ಕೋರ್ಟ್ ನೀಡುತ್ತಿರುವ ಶಿಕ್ಷೆಯಾಗಿದೆ ಎಂದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಮಾಲೇಗಾಂವ್ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. 
ಕೋರ್ಟ್ (ಸಾಂಕೇತಿಕ ಚಿತ್ರ)
ಕೋರ್ಟ್ (ಸಾಂಕೇತಿಕ ಚಿತ್ರ)

ರಸ್ತೆ ಅಪಘಾತ ಪ್ರಕರಣದಲ್ಲಿನ ಗಲಾಟೆ ಪ್ರಕರಣದ ಅಪರಾಧಿಯೊಬ್ಬನಿಗೆ ದಿನಕ್ಕೆ 5 ಬಾರಿ ನಮಾಜ್ ಮಾಡುವುದು ಹಾಗೂ 2 ಗಿಡಗಳನ್ನು ನೆಡುವುದೇ ಕೋರ್ಟ್ ನೀಡುತ್ತಿರುವ ಶಿಕ್ಷೆಯಾಗಿದೆ ಎಂದು ಮಹಾರಾಷ್ಟ್ರದ ನಾಸಿಕ್ ನಲ್ಲಿರುವ ಮಾಲೇಗಾಂವ್ ಕೋರ್ಟ್ ಮಹತ್ವದ ಆದೇಶ ಪ್ರಕಟಿಸಿದೆ. 

ಅಪರಾಧಿ ನಮಾಜ್ ಮಾಡುವುದು ಹಾಗೂ ದಿನಕ್ಕೆ 2 ಗಿಡ ನೆಡುವುದನ್ನು 21 ದಿನಗಳ ಕಾಲ ಮಾಡಬೇಕು. ಆತನಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತಿಲ್ಲ ಎಂದು ಕೋರ್ಟ್ ಹೇಳಿದೆ. ಮ್ಯಾಜಿಸ್ಟ್ರೇಟ್ ತೇಜ್ವಂತ್ ಸಿಂಗ್ ಸಂಧು ಈ ಆದೇಶವನ್ನು ಫೆ.27 ರಂದು ಪ್ರಕಟಿಸಿದ್ದು,  ಓರ್ವ ಅಪರಾಧಿ ಅಪರಾಧವನ್ನು ಪುನರಾವರ್ತಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಸೂಕ್ತ ಎಚ್ಚರಿಕೆ ನೀಡಿ ನಂತರ ಆತ/ ಆಕೆಯನ್ನು ಬಿಡುಗಡೆ ಮಾಡಲು ಅಪರಾಧಿಗಳ ಪರಿವೀಕ್ಷಣಾ ಕಾಯಿದೆಯ ನಿಬಂಧನೆಗಳು  ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ಪ್ರಕರಣದಲ್ಲಿ ಕೇವಲ ಎಚ್ಚರಿಕೆ ಸಾಕಾಗುವುದಿಲ್ಲ. ಆದರೆ ಅಪರಾಧಿಗೆ ತಾನು ಮಾಡಿದ ಅಪರಾದದ ನೆನಪು ಇರಬೇಕು ಹಾಗೂ ಆತ ಅದನ್ನು ಪುನರಾವರ್ತಿಸಬಾರದು. ನನ್ನ ಪ್ರಕಾರ, ಸೂಕ್ತ ಎಚ್ಚರಿಕೆ ಎಂದರೆ, ಅಪರಾಧಿ ತನ್ನ ಅಪರಾಧವನ್ನು ನೆನಪಿನಲ್ಲಿಟ್ಟುಕೊಂಡು ಅದನ್ನೇ ಇನ್ನೆಂದೂ ಪುನರಾವರ್ತಿಸಬಾರದಂತೆ ಮಾಡುವುದಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

30 ವರ್ಷದ ಅಪರಾಧಿ ರೌಫ್ ಖಾನ್, 2010 ರ ಪ್ರಕರಣವೊಂದರಲ್ಲಿ ರಸ್ತೆ ಅಪಘಾತ ಗಲಾಟೆಯೊಂದರಲ್ಲಿ ವ್ಯಕ್ತಿಯೋರ್ವನಿಗೆ ಥಳಿಸಿ ಘಾಸಿಗೊಳಿಸಿದ್ದ. ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಖಾನ್ ತಾನು ದಿನನಿತ್ಯ ನಮಾಜ್ ಮಾಡುತ್ತಿಲ್ಲ ಎಂಬ ಅಂಶ ಬಹಿರಂಗವಾಗಿದೆ. ಆದ್ದರಿಂದ ಕೋರ್ಟ್ ಆತನಿಗೆ ಫೆ.28 ರಿಂದ 21 ದಿನಗಳ ಕಾಲ ದಿನಕ್ಕೆ 5 ಬಾರಿ ನಮಾಜ್ ಮಾಡಬೇಕೆಂದು ಹೇಳಿದ್ದು, ಸೋನಾಪುರ ಮಸೀದಿಯ ಆವರಣದಲ್ಲಿ ದಿನವೊಂದಕ್ಕೆ 2 ಗಿಡಗಳನ್ನು ನೆಟ್ಟು ಅದರ ಪೋಷಣೆ ಮಾಡಬೇಕೆಂದು ಆದೇಶ ನೀಡಿದೆ. 

ಖಾನ್ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂ ಪ್ರೇರಿತನಾಗಿ ಘಾಸಿಗೊಳಿಸುವುದು) 325 ( ಸ್ವಯಂಪ್ರೇರಣೆಯಿಂದ ಗಂಭೀರವಾದ ಗಾಯವನ್ನು ಉಂಟುಮಾಡುವುದು) ಸೆಕ್ಷನ್ 504 (ಶಾಂತಿ ಭಂಗವನ್ನು ಪ್ರಚೋದಿಸುವುದು, ಉದ್ದೇಶಪೂರ್ವಕ ಅವಮಾನ) ಹಾಗೂ 506 ಅಡಿಯಲ್ಲಿ (ಕ್ರಿಮಿನಲ್ ಬೆದರಿಕೆ) ಪ್ರಕರಣಗಳು ದಾಖಲಾಗಿದ್ದವು. ಸೆಕ್ಷನ್ 323 ರ ಅಡಿಯಲ್ಲಿ ಖಾನ್ ನ್ನು ಕೋರ್ಟ್ ಅಪರಾಧಿ ಎಂದು ತೀರ್ಪು ಪ್ರಕಟಿಸಿದ್ದು ಉಳಿದೆ ಸೆಕ್ಷನ್ ಗಳ ಆರೋಪದಿಂದ ಮುಕ್ತಗೊಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com