ಭೂಮಿ ಮಂಜೂರಾತಿ ಕುರಿತು ಸಿಜೆಐ- ಬಾರ್ ಅಸೋಸಿಯೇಷನ್ ಅಧ್ಯಕ್ಷರ ನಡುವೆ ಮಾತಿನ ಚಕಮಕಿ!
ನವದೆಹಲಿ: ಸಿಜೆಐ ಹಾಗೂ ಸುಪ್ರೀಂ ಕೋರ್ಟ್ ನ ಬಾರ್ ಅಸೋಸಿಯೇಷನ್ ಅಧ್ಯಕ್ಷ ವಿಕಾಸ್ ಸಿಂಗ್ ಅವರ ನಡುವಿನ ಮಾತಿನ ಚಕಮಕಿಗೆ ಇಂದು ಸುಪ್ರೀಂ ಕೋರ್ಟ್ ಸಾಕ್ಷಿಯಾಯಿತು.
ಲಾಯರ್ಸ್ ಚೇಂಬರ್ಸ್ ಗೆ ಭೂಮಿ ಮಂಜೂರು ಮಾಡುವ ಸಂಬಂಧ ಈ ಮಾತಿನ ಚಕಮಕಿ ನಡೆದಿದೆ. ಪ್ರಕರಣಗಳ ಉಲ್ಲೇಖದ ಸಂದರ್ಭದಲ್ಲಿ ಎಸ್ ಸಿಬಿಎ ಅಧ್ಯಕ್ಷರು ಸಿಜೆಐ ಹಗೂ ನ್ಯಾ. ಪಿಎಸ್ ನರಸಿಂಹ ಹಾಗೂ ಜೆಬಿ ಪರ್ದಿವಾಲ ಅವರಿದ್ದ ಪೀಠದ ಎದುರು ಪ್ರಕರಣವನ್ನು ಉಲ್ಲೇಖಿಸಿದ್ದು, ವಿಚಾರಣೆಯ ಪಟ್ಟಿಯಲ್ಲಿ ಪ್ರಕರಣವನ್ನು ಸೇರಿಸಲು 6 ತಿಂಗಳಿನಿಂದ ಕಷ್ಟಪಡುತ್ತಿದ್ದೇನೆ ಎಂದು ಹೇಳಿದ್ದಾರೆ.
ವಿಚಾರಣೆಯ ಪಟ್ಟಿಗೆ ಸೇರಿಸಲು 6 ತಿಂಗಳಿನಿಂದ ಕಷ್ಟಪಡುತ್ತಿದ್ದೇನೆ, ನನ್ನನ್ನು ಸಾಮಾನ್ಯ ಕಕ್ಷಿಗಾರನ ರೀತಿಯಲ್ಲೇ ಪರಿಗಣಿಸಿ ಎಂದು ಸಿಂಗ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಜೆಐ, ನೀವು ಜಾಗಕ್ಕಾಗಿ ಈ ರೀತಿ ಬೇಡಿಕೆ ಇಡುವಂತಿಲ್ಲ. ನಾವು ದಿನವಿಡೀ ಖಾಲಿ ಕುಳಿತಿದ್ದಾಗಷ್ಟೇ ನೀವು ಈ ರೀತಿ ನಮಗೆ ಹೇಳಬಹುದಾಗಿದೆ ಎಂದು ತೀಕ್ಷ್ಣವಾಗಿ ನುಡಿದಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿದ ಸಿಂಗ್, ನಾನು ನೀವು ಸುಮ್ಮನೆ ಕುಳಿತಿದ್ದೀರಿ ಎಂದು ಹೇಳುತ್ತಿಲ್ಲ. ನಾನು ಪ್ರಕರಣವನ್ನು ವಿಚಾರಣೆ ಪಟ್ಟಿಗೆ ಸೇರಿಸಲು ಯತ್ನಿಸುತ್ತಿದ್ದೇವೆ ಅಷ್ಟೇ. ಇದು ಆಗದೇ ಇದ್ದರೆ ನಾನು ಮುಂದಿನ ಹಂತಕ್ಕೆ ಹೋಗಬೇಕಾಗುತ್ತದೆ. ಅಷ್ಟೇ ಅಲ್ಲದೇ ನಿಮ್ಮ ನಿವಾಸದೆದುರೂ ತರಬೇಕಾಗುತ್ತದೆ, ಈ ರೀತಿಯಾಗಬಾರದು ಎಂದು ನಾನು ಬಯಸುತ್ತಿದ್ದೇನೆ ಎಂದು ಹೇಳಿದರು
ಇದಕ್ಕೆ ಕೆಂಡಾಮಂಡಲರಾದ ನ್ಯಾ. ಚಂದ್ರಚೂಡ್, ಮುಖ್ಯ "ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಬೇಡಿ, ಇದು ನಡೆದುಕೊಳ್ಳುತ್ತಿರುವ ರೀತಿಯೆ? ದಯಮಾಡಿ ಕುಳಿತುಕೊಳ್ಳಿ... ಈ ರೀತಿ ಪಟ್ಟಿಗೆ ಸೇರಿಸಲು ಸಾಧ್ಯವಿಲ್ಲ. ನಿಮ್ಮಿಂದ ನಾನು ದೃತಿಗೆಡುವುದಿಲ್ಲ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ