ಭಾರತದಲ್ಲಿ ಸಲಿಂಗ ವಿವಾಹ ಕಾನೂನುಬದ್ಧವಾಗುತ್ತಾ? ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ
ಬೆಂಗಳೂರು: ಎರಡು ವರ್ಷಗಳ ಹಿಂದೆ ಅಭಯ್ ಡ್ಯಾಂಗ್ ಮತ್ತು ಸುಪ್ರಿಯೋ ಚಕ್ರವರ್ತಿ ಅವರು ಹೆಚ್ಚಿನ ಭದ್ರತೆಯಲ್ಲಿ ಮದುವೆಯಾಗಿದ್ದು, ಈ ಸಲಿಂಗಕಾಮಿ ಜೋಡಿಯ ವಿವಾಹವನ್ನು ಕಾನೂನುಬದ್ಧವಾಗಿ ಗುರುತಿಸಲಾಗಿಲ್ಲ. ಈಗ ತಮ್ಮ ಸಲಿಂಗ ವಿವಾಹ ಕಾನೂನುಬದ್ಧಗೊಳಿಸಲು ಹೋರಾಟ ನಡೆಸುತ್ತಿದ್ದಾರೆ.
ಭಾರತದ ಸಲಿಂಗಿ ಜೋಡಿಗಳು ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸೋಮವಾರದಿಂದ ವಿಚಾರಣೆ ಆರಂಭಿಸಲಿದೆ.
"ಈ ವಿಭಿನ್ನ ವಿವಾಹಕ್ಕೆ ಯಾವುದೇ ಹಕ್ಕುಗಳನ್ನು ನೀಡಿಲ್ಲ. ಸಲಿಂಗಿ ದಂಪತಿಗಳನ್ನು ಸಂಪೂರ್ಣ ಲಘುವಾಗಿ ಪರಿಗಣಿಸುತ್ತಾರೆ. ಒಟ್ಟಿಗೆ ವಾಸಿಸುವ ಮತ್ತು ಜತೆಯಾಗಿ ಜೀವನವನ್ನು ಮುನ್ನಡೆಸುವ ಪ್ರಕ್ರಿಯೆಯಲ್ಲಿ ನಾವು ಹಲವಾರು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲಎಂದು ಹೈದರಾಬಾದ್ ನಗರದಲ್ಲಿರುವ ಸಾಫ್ಟ್‌ವೇರ್ ಮ್ಯಾನೇಜರ್ ಡಾಂಗ್ ಎಎಫ್‌ಪಿಗೆ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಸಲಿಂಗ ವಿವಾಹ ಕಾನೂನುಬದ್ಧಗೊಳಿಸುವ ಅರ್ಜಿಯನ್ನು ಆಲಿಸಲು ನಿರ್ಧರಿಸಿದ ಬಗ್ಗೆ, 36 ವರ್ಷದ ಡ್ಯಾಂಗ್ ಸಂತೋಷ ವ್ಯಕ್ತಪಡಿಸಿದ್ದು, ಆ ಬಗ್ಗೆ ನಾವು ಕನಸು ಕಾಣುತ್ತಿದ್ದೆವು" ಎಂದು ಹೇಳಿದ್ದಾರೆ.
"ನಮ್ಮ ಸಂಬಂಧವು ಇತರ ಯಾವುದೇ ಸಂಬಂಧಗಳಂತೆಯೇ ನಿಜವಾಗಿದೆ. ನಮಗೆ ಆ ಹಕ್ಕುಗಳನ್ನು ಏಕೆ ನಿರಾಕರಿಸಬೇಕು?" ಎಂದು ಈವೆಂಟ್ ಮ್ಯಾನೇಜ್ ಮೆಂಟ್ ಕಂಪನಿ ನಡೆಸುತ್ತಿರುವ ಚಕ್ರವರ್ತಿ ಪ್ರಶ್ನಿಸಿದ್ದಾರೆ.
ಈ ವಿಚಾರವಾಗಿ ನಾಲ್ಕು ಸಲಿಂಗಕಾಮಿ ದಂಪತಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. 140 ಕೋಟಿ ಜನರಿರುವ ಮತ್ತು ಸಾಮಾಜಿಕವಾಗಿ ಸಂಪ್ರದಾಯವಾದಿ ದೇಶದಲ್ಲಿ ಇದು ತುಂಬಾ ಸೂಕ್ಷ್ಮ ವಿಷಯವಾಗಿದೆ. ದೇಶದಲ್ಲಿ ಸಲಿಂಗಕಾಮದ ಬಗ್ಗೆ ಬಹಿರಂಗವಾಗಿ ಮಾತನಾಡುವುದನ್ನು ಕೂಡಾ ಅನೇಕರು ವಿರೋಧಿಸುತ್ತಾರೆ.
2018ರಲ್ಲಿ ಸಲಿಂಗಿಗಳ ಮೇಲಿನ ಹಲವು ವರ್ಷಗಳ ನಿಷೇಧವನ್ನು ರದ್ದುಗೊಳಿಸಿದ್ದ ಸುಪ್ರೀಂ ಕೋರ್ಟ್, ಸಲಿಂಗಿಗಳ ವಿವಾಹವು ಅಪರಾಧವಲ್ಲ ಎಂದು ಹೇಳಿತ್ತು. ಇದಕ್ಕೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ