ಚೆನ್ನೈ: ಲೈಂಗಿಕ ಕಿರುಕುಳ ನೀಡುತ್ತಿದ್ದ ನೃತ್ಯ ಶಿಕ್ಷಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿರುವ ಹಿನ್ನೆಲೆಯಲ್ಲಿ ಚೆನ್ನೈ ನ ಕಲಾಕ್ಷೇತ್ರ ಫೌಂಡೇಶನ್ ನ್ನು ಬಂದ್ ಮಾಡಲಾಗಿದೆ.
ಕಾಲೇಜು ಬಂದ್ ಆಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಇನ್ನೆರಡು ದಿನಗಳಲ್ಲಿ ಹಾಸ್ಟೆಲ್ ಗಳನ್ನು ಖಾಲಿ ಮಾಡಲು ಸೂಚಿಸಲಾಗಿದೆ.
ಆರೋಪಿ ಶಿಕ್ಷಕನ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲು ಆಗ್ರಹಿಸಿ ಕ್ಯಾಂಪಸ್ ನಲ್ಲಿರುವ ಆಲದ ಮರದ ಕೆಳಗೆ ವಿದ್ಯಾರ್ಥಿಗಳು ಬೆಳಿಗ್ಗೆಯಿಂದ ಮೌನ ಪ್ರತಿಭಟನೆ ಕೈಗೊಂಡಿದ್ದರು. ಸಂಜೆಯ ನಂತರ ಕ್ಯಾಂಪಸ್ ನಿಂದ ತಿರುವನ್ಮಯೂರ್ ರಸ್ತೆವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ಕೈಗೊಂಡಿದ್ದರು.
ಸಂಸ್ಥೆಯ ನಿರ್ದೇಶಕರಾದ ರೇವತಿ ರಾಮಚಂದ್ರನ್ ಅವರು ಪ್ರತಿಭಟನೆ ಕೈಬಿಡುವಂತೆ ವಿದ್ಯಾರ್ಥಿಗಳಿಗೆ ಮನವಿ ಮಾಡಿದರಾದರೂ, ಆಡಳಿತ ಮಂಡಳಿ ವಿಷಯವನ್ನು ನಿರ್ವಹಿಸುತ್ತಿರುವ ಬಗ್ಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಲು ಬಂದಿದ್ದಾಗ ಅವರೊಂದಿಗೆ ಮಾತನಾಡುವುದಕ್ಕೂ ಸೂಕ್ತ ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿದ್ದಾರೆ.
Advertisement