ಪೋಕ್ಸೋ ಅಡಿ ಕೇಸ್ ದಾಖಲಿಸಿದರೂ ಡಬ್ಲ್ಯುಎಫ್‌ಐ ಅಧ್ಯಕ್ಷರನ್ನು ಏಕೆ ಬಂಧಿಸುತ್ತಿಲ್ಲ?: ಕುಸ್ತಿಪಟುಗಳಿಗೆ ಸಿಧು ಬೆಂಬಲ

ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಪ್ರಾಧಿಕಾರದ(ಡಬ್ಲ್ಯುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್...
ಕುಸ್ತಿಪಟುಗಳಿಗೆ ಸಿಧು ಬೆಂಬಲ
ಕುಸ್ತಿಪಟುಗಳಿಗೆ ಸಿಧು ಬೆಂಬಲ

ನವದೆಹಲಿ: ಮಾಜಿ ಕ್ರಿಕೆಟಿಗ ಮತ್ತು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಅವರು ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಪ್ರಾಧಿಕಾರದ(ಡಬ್ಲ್ಯುಎಫ್‌ಐ) ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿ ಪಟುಗಳನ್ನು ಸೋಮವಾರ ಭೇಟಿ ಮಾಡಿ, ಬೆಂಬಲ ಸೂಚಿಸಿದ್ದಾರೆ.

ಬಳಿಕ ಟ್ವೀಟ್ ಮಾಡಿರುವ ಸಿಧು, ಡಬ್ಲ್ಯುಎಫ್‌ಐ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಜಾಮೀನು ರಹಿತ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಲಾಗಿದೆ. ಆದರೂ ಇದುವರೆಗೆ ಅವರನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಸೇರಿದಂತೆ ಭಾರತದ ಪ್ರಮುಖ ಕುಸ್ತಿಪಟುಗಳು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಕಳೆದ ಎಂಟು ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕ್ರೀಡಾಪಟುಗಳನ್ನು ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ಮತ್ತು ಭೂಪಿಂದರ್ ಸಿಂಗ್ ಹೂಡಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ರಾಷ್ಟ್ರೀಯ ಲೋಕದಳದ ನಾಯಕ ಜಯಂತ್ ಚೌಧರಿ, ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್, ದೆಹಲಿ ಸರ್ಕಾರದ ಸಚಿವರಾದ ಅತಿಶಿ ಸಿಂಗ್ ಮತ್ತು ಸುರ್ಬಾ ಭಾರದ್ವಾಜ್ ಅವರು ಜಂತರ್ ಮಂತರ್‌ಗೆ ಭೇಟಿ ನಂತರ ಇಂದು ಸಿಧು ಅವರು ಕುಸ್ತಿ ಪಟುಗಳನ್ನು ಭೇಟಿ ಮಾಡಿದ್ದಾರೆ.

ಕುಸ್ತಿಪಟುಗಳೊಂದಿಗಿನ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಸಿಧು, ಬ್ರಿಜ್ ಭೂಷಣ್ ವಿರುದ್ಧ ಎಫ್‌ಐಆರ್ ದಾಖಲಿಸಲು ದೆಹಲಿ ಪೊಲೀಸರ ವಿಳಂಬ ಮಾಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com