ಪೊಲೀಸರ ದೌರ್ಜನ್ಯದಿಂದ ಬೇಸರ: ಕುಸ್ತಿಪಟುಗಳಿಂದ ಪದಕ ಮತ್ತು ಪ್ರಶಸ್ತಿಗಳನ್ನು ಹಿಂದಿರುಗಿಸುವ ಬೆದರಿಕೆ!

ದೆಹಲಿ ಪೊಲೀಸರ ದೌರ್ಜನ್ಯದಿಂದ ಮನನೊಂದ ಪ್ರತಿಭಟನಾ ನಿರತ ಕುಸ್ತಿಪಟುಗಳು ಇಂದು ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ್ದು, ಈ ರೀತಿ ಅಗೌರವ ತೋರಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.
ಕುಸ್ತಿಪಟುಗಳು
ಕುಸ್ತಿಪಟುಗಳು
Updated on

ನವದೆಹಲಿ: ದೆಹಲಿ ಪೊಲೀಸರ ದೌರ್ಜನ್ಯದಿಂದ ಮನನೊಂದ ಪ್ರತಿಭಟನಾ ನಿರತ ಕುಸ್ತಿಪಟುಗಳು ಇಂದು ತಮ್ಮ ಪದಕ ಮತ್ತು ಪ್ರಶಸ್ತಿಗಳನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ಬೆದರಿಕೆ ಹಾಕಿದ್ದು, ಈ ರೀತಿ ಅಗೌರವ ತೋರಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.

ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಕುಸ್ತಿಪಟುಗಳು ಮಲಗಲು ಮಂಚಗಳನ್ನು ತಂದಾಗ ಗಲಾಟೆ ಪ್ರಾರಂಭವಾಯಿತು. ನಿಯಮಾನುಸಾರ ಪ್ರದರ್ಶನ ನಡೆಯುವ ಸ್ಥಳದಲ್ಲಿ ಅಂತಹ ವಸ್ತುಗಳನ್ನು ಅನುಮತಿಸಲಾಗುವುದಿಲ್ಲ ಎಂದು ಕರ್ತವ್ಯದಲ್ಲಿದ್ದ ಪೊಲೀಸರು ಅದರ ಬಗ್ಗೆ ವಿಚಾರಿಸಲು ಪ್ರಾರಂಭಿಸಿದರು. ಈ ವೇಳೆ ಪುರುಷ ಪೊಲೀಸ್ ಅಧಿಕಾರಿಗಳು ತಮ್ಮನ್ನು ತಳ್ಳಾಡಿದರು, ನಿಂದಿಸಿದರು ಎಂದು ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲಿಕ್ ಹೇಳಿದ್ದಾರೆ.

ಈ ಗಲಾಟೆಯಲ್ಲಿ ಸಂಗೀತಾ ಫೋಗಟ್ ಸಹೋದರ ದುಶ್ಯಂತ್ ಸೇರಿದಂತೆ ಇಬ್ಬರು ಕುಸ್ತಿಪಟುಗಳಿಗೆ ಗಾಯಗಳಾಗಿವೆ. ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಬಜರಂಗ್ ಪುನಿಯಾ ಗುರುವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, 'ಕುಸ್ತಿಪಟುಗಳನ್ನು ಈ ರೀತಿ ನಡೆಸಿಕೊಳ್ಳುವುದು ಎಷ್ಟು ಸರಿ. ಇದು ಹೀಗೆ ಮುಂದುವರೆದರೆ ನಾವು ನಮ್ಮ ಎಲ್ಲಾ ಪದಕಗಳು ಮತ್ತು ಪ್ರಶಸ್ತಿಗಳನ್ನು ಭಾರತ ಸರ್ಕಾರಕ್ಕೆ ಹಿಂದಿರುಗಿಸುತ್ತೇವೆ. ಬಳಿಕ ಸಾಮಾನ್ಯ ಜೀವನವನ್ನು ನಡೆಸುತ್ತೇವೆ ಎಂದರು.

ವಿನೇಶ್, ಸಾಕ್ಷಿ ಮತ್ತು ಬಜರಂಗ್ ಮೂವರೂ ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯ ಖೇಲ್ ರತ್ನ ಸ್ವೀಕರಿಸಿದ್ದಾರೆ. ಸಾಕ್ಷಿ(2017) ಮತ್ತು ಬಜರಂಗ್(2019) ಅವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮಶ್ರೀ ಪ್ರಶಸ್ತಿಯನ್ನು ಸಹ ಪಡೆದಿದ್ದಾರೆ.

'ಪೊಲೀಸರು ನಮ್ಮನ್ನು ತಳ್ಳಾಡುವಾಗ, ನಿಂದಿಸುವಾಗ, ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದಾಗ, ನಾವು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು ಎಂದು ಅವರು ನೋಡಿಲ್ಲ. ನಾನು ಮಾತ್ರವಲ್ಲದೆ ಸಾಕ್ಷಿ ಮಲಿಕ್ ಕೂಡ ಇಲ್ಲಿದ್ದರು. ನಮ್ಮೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಮಹಿಳೆಯರು ಮತ್ತು ಹೆಣ್ಣುಮಕ್ಕಳು ಬೀದಿಗಳಲ್ಲಿ ಕುಳಿತು ಕರುಣೆಗಾಗಿ ಬೇಡಿಕೊಳ್ಳುತ್ತಿದ್ದಾರೆ. ಆದರೆ ಯಾರೂ ಕಾಳಜಿ ವಹಿಸುವುದಿಲ್ಲ ಎಂದು ಬಜರಂಗ್ ಪುನಿಯಾ ಹೇಳಿದ್ದಾರೆ.

ಅಪ್ರಾಪ್ತ ವಯಸ್ಕ ಸೇರಿದಂತೆ ಏಳು ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಏಪ್ರಿಲ್ 23ರಿಂದ ರಾಷ್ಟ್ರ ರಾಜಧಾನಿಯಲ್ಲಿ ಕುಸ್ತಿಪಟುಗಳು ಮತ್ತೆ ಮುಷ್ಕರ ನಡೆಸುತ್ತಿದ್ದಾರೆ. ಇನ್ನು ಕುಸ್ತಿ ಫೆಡರೇಶನ್ ಅಧ್ಯಕ್ಷರ ವಿರುದ್ಧ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು ಪ್ರತಿಭಟನೆಯು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.

ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಎಫ್‌ಐಆರ್, ಸುಪ್ರೀಂ ಕೋರ್ಟ್ ನಿಂದ ಅರ್ಜಿ ಪ್ರಕ್ರಿಯೆ ಮುಕ್ತಾಯ
ಲೈಂಗಿಕ ಕಿರುಕುಳದ ಆರೋಪದ ಮೇಲೆ ಭಾರತದ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ ನಂತರ, ಅಂತರರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮೂವರು ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ. ಇದೇ ವೇಳೆ ಅರ್ಜಿದಾರರಿಗೆ ಯಾವುದೇ ಇತರ ಸಮಸ್ಯೆಗಳ ಸಂದರ್ಭದಲ್ಲಿ ಮ್ಯಾಜಿಸ್ಟ್ರೇಟ್ ಅಥವಾ ದೆಹಲಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲು ಸ್ವತಂತ್ರರು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com