ಡಿ ಕೆ ಶಿವಕುಮಾರ್ ಹೈಕಮಾಂಡ್ ಮಾತಿಗೆ ಬೆಲೆ ಕೊಟ್ಟು ಸಿಎಂ ಹುದ್ದೆ ಬಿಟ್ಟುಕೊಟ್ಟಿದ್ದು ಏಕೆ? ಏನೆಂದರು?

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು 5 ದಿನಗಳ ನಂತರ ದೆಹಲಿಯಲ್ಲಿ ಹೈಕಮಾಂಡ್ ನಡೆಸಿದ ಸಂಧಾನ ಸೂತ್ರದಂತೆ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಉಳಿದ ಎರಡೂವರೆ ವರ್ಷ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದು ಇಂದು ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದು 5 ದಿನಗಳ ನಂತರ ದೆಹಲಿಯಲ್ಲಿ ಹೈಕಮಾಂಡ್ ನಡೆಸಿದ ಸಂಧಾನ ಸೂತ್ರದಂತೆ ಮೊದಲ ಎರಡೂವರೆ ವರ್ಷ ಸಿದ್ದರಾಮಯ್ಯ ಮತ್ತು ಉಳಿದ ಎರಡೂವರೆ ವರ್ಷ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದು ಇಂದು ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ.

ಕಳೆದ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸಮ್ಮುಖದಲ್ಲಿ ಸಂಧಾನ ಸೂತ್ರ ನಡೆದಿದೆ. ಇದಾದ ಬಳಿಕ ಇಂದು ಬೆಳಗ್ಗೆ ಕೆ ಸಿ ವೇಣುಗೋಪಾಲ್ ನಿವಾಸದಲ್ಲಿ ಉಪಹಾರ ಕೂಟ ನಡೆಯುತ್ತಿದ್ದು ಅದಕ್ಕೆ ಹೊರಟ ಡಿ ಕೆ ಶಿವಕುಮಾರ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ಮಾತನಾಡಿಸಿದರು.

ಈ ವೇಳೆ ಡಿ ಕೆ ಶಿವಕುಮಾರ್, ಗಾಂಧಿ ಕುಟುಂಬಕ್ಕೆ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಮಾತಿಗೆ ಗೌರವ ನೀಡಿ ಅಧಿಕಾರ ಹಂಚಿಕೆ ಸೂತ್ರವನ್ನು ಒಪ್ಪಿಕೊಂಡಿದ್ದೇನೆ. ಅಂತಿಮವಾಗಿ ಪಕ್ಷದ ಹಿತಾಸಕ್ತಿ ನನಗೆ ಮುಖ್ಯ, ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಒಪ್ಪಿಕೊಂಡಿದ್ದೇನೆ. ಕೆಲವೊಮ್ಮೆ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ನಗುತ್ತಾ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ಕರ್ನಾಟಕದ ಬಗ್ಗೆ ನಮಗೆ ಬದ್ಧತೆ ಇದೆ, ಮುಂದಿನ ವರ್ಷ ಸಂಸತ್ತು ಚುನಾವಣೆ ಇದೆ. ಹೀಗಾಗಿ ಪಕ್ಷದ ಹಿತದೃಷ್ಟಿಯಿಂದ ಸಂಧಾನ ಸೂತ್ರಕ್ಕೆ ಒಪ್ಪಿಕೊಂಡೆ ಎಂದಿದ್ದಾರೆ. 

ನಂತರ ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿ ಕೆ ಶಿವಕುಮಾರ್ ಸೋದರ ಡಿ ಕೆ ಸುರೇಶ್, ನನಗೆ ವೈಯಕ್ತಿಕವಾಗಿ ಸಮಾಧಾನ, ಖುಷಿಯಾಗಿಲ್ಲ, ಆದರೆ ಕರ್ನಾಟಕ ಜನತೆಯ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲವೊಂದು ಹೊಂದಾಣಿಕೆಗಳನ್ನು ಮಾಡಿಕೊಂಡು ಒಪ್ಪ ಬೇಕಾಗುತ್ತದೆ,ಮುಂದಿನ ದಿನಗಳಲ್ಲಿ ನೋಡೋಣ ಏನಾಗುತ್ತದೆ ಎಂದು ನಾವು ಸಾಕಷ್ಟು ದೂರ ಕ್ರಮಿಸಬೇಕಿದೆ ಎಂದರು.

ಇಂದು ಬೆಳಗ್ಗೆ 10 ಗಂಟೆಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದಿದ್ದು ಅದರಲ್ಲಿ ಏನು ಮಾತನಾಡಲಿದ್ದಾರೆ ಎಂಬುದು ಮತ್ತು ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಏನು ತೀರ್ಮಾನ ಹೊರಬರಲಿದೆ ಎಂಬುದು ಮುಖ್ಯವಾಗಿದೆ.

ಹೈಕಮಾಂಡ್ ಸಂಧಾನ ಸೂತ್ರದಲ್ಲಿ ಸಿದ್ದರಾಮಯ್ಯನವರು ನಾಡಿದ್ದು ಮೇ 20ರಂದು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅವರ ಜೊತೆ ಉಪ ಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್ ಸಹ ಪದಗ್ರಹಣ ಮಾಡಲಿದ್ದಾರೆ. ನೂತನ ಸಚಿವರು ಅಂದೇ ಪ್ರಮಾಣ ವಚನ ಸ್ವೀಕರಿಸುತ್ತಾರೆಯೇ ಎಂಬುದು ತಿಳಿದುಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com