ಸಿದ್ದರಾಮಯ್ಯ ಪ್ರಮಾಣ ವಚನ ಸಮಾರಂಭ: ಕೇರಳ ಸಿಎಂಗಿಲ್ಲ ಆಹ್ವಾನ; ಎಲ್‌ಡಿಎಫ್ ಅಸಮಾಧಾನ
ನವದೆಹಲಿ: ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ಶನಿವಾರ ಪ್ರಮಾಣ ವಚನ ಸ್ವೀಕರಿಸುತ್ತಿದ್ದು, ಈ ಸಮಾರಂಭಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕಾಂಗ್ರೆಸ್ ಆಹ್ವಾನಿಸಿಲ್ಲ. ಕಾಂಗ್ರೆಸ್ ನ ಈ ಕ್ರಮ ಅಪಕ್ವ ರಾಜಕೀಯ ಮತ್ತು ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಆಡಳಿತಾರೂಢ ಎಲ್‌ಡಿಎಫ್ ಶುಕ್ರವಾರ ಟೀಕಿಸಿದೆ.
ನೆರೆಯ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ ಇತರರಿಗೆ ಆಹ್ವಾನ ನೀಡಲಾಗಿದ್ದು, ಮೇ 20 ರಂದು ಬೆಂಗಳೂರಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಕೇರಳ ಸಿಎಂಗೆ ಆಹ್ವಾನ ನೀಡದಿರುವುದು ಬಿಜೆಪಿಯ "ಫ್ಯಾಸಿಸ್ಟ್" ರಾಜಕೀಯದ ವಿರುದ್ಧ ದೇಶದ ಜಾತ್ಯತೀತ ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಒಗ್ಗೂಡಿಸುವ ಧ್ಯೇಯ ಸಾಧಿಸಲು ಸಾಧ್ಯವಿಲ್ಲ ಎಂದು ಎಲ್‌ಡಿಎಫ್ ಸಂಚಾಲಕ ಇ ಪಿ ಜಯರಾಜನ್ ಹೇಳಿದ್ದಾರೆ.
"ಕಾಂಗ್ರೆಸ್ ಈಗ ದೇಶದಲ್ಲಿ ಯಾವ ಬಿಜೆಪಿ ವಿರೋಧಿ ನಿಲುವು ಅನುಸರಿಸಲಿದೆ?" ಪ್ರಶ್ನಿಸಿದ ಜಯರಾಜನ್, ಈ ಕ್ರಮವು ವಿರೋಧ ಪಕ್ಷದ "ಅಪ್ರಬುದ್ಧ" ರಾಜಕೀಯ ಮತ್ತು ಅದರ ನಿರ್ದೇಶನ ಕೊರತೆಯ ಸೂಚನೆಯಾಗಿದೆ" ಎಂದು ಹೇಳಿದ್ದಾರೆ.
ರಾಷ್ಟ್ರ ರಾಜಕೀಯ ಮತ್ತು ದೇಶದ ಬೆಳವಣಿಗೆಗಳನ್ನು ಅವಲೋಕಿಸುವ ಮತ್ತು ಮೌಲ್ಯಮಾಪನ ಮಾಡುವಲ್ಲಿ ಕಾಂಗ್ರೆಸ್ ನಾಯಕತ್ವ ದುರ್ಬಲವಾಗಿದೆ ಎಂಬುದನ್ನು ಇದು ಸಾಬೀತುಪಡಿಸಿದೆ ಎಂದು ಮಾರ್ಕ್ಸ್‌ವಾದಿ ಪಕ್ಷದ ನಾಯಕ ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ