ಕಳೆದ 48 ಗಂಟೆಗಳಲ್ಲಿ ಮಹಾರಾಷ್ಟ್ರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ 59 ಜನ ಸಾವು: ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ

ಕಳೆದ 48 ಗಂಟೆಗಳಲ್ಲಿ ಮಹಾರಾಷ್ಟ್ರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 59 ಸಾವುಗಳು ದಾಖಲಾಗಿವೆ. ನಾಂದೇಡ್‌ನ ಶಂಕರರಾವ್ ಚವಾನ್ ಆಸ್ಪತ್ರೆಯಲ್ಲಿ 35 ಮಂದಿ ಸಾವನ್ನಪ್ಪಿದ್ದರೆ ಔರಂಗಾಬಾದ್‌ನ ಘಾಟಿ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಕಳೆದ 48 ಗಂಟೆಗಳಲ್ಲಿ ಮಹಾರಾಷ್ಟ್ರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 59 ಸಾವುಗಳು ದಾಖಲಾಗಿವೆ. ನಾಂದೇಡ್‌ನ ಶಂಕರರಾವ್ ಚವಾನ್ ಆಸ್ಪತ್ರೆಯಲ್ಲಿ 35 ಮಂದಿ ಸಾವನ್ನಪ್ಪಿದ್ದರೆ ಔರಂಗಾಬಾದ್‌ನ ಘಾಟಿ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ್ದಾರೆ.

ನಾಂದೇಡ್ ಮತ್ತು ಘಾಟಿಯಲ್ಲಿ ಸಂಭವಿಸಿದ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಇನ್ನು ನಾಂದೇಡ್ ಮತ್ತು ಘಾಟಿಯಲ್ಲಿ ಔಷಧಿ ಕೊರತೆ ಹಾಗೂ ವೈದ್ಯರ ಅಲಭ್ಯತೆಯಿಂದ ಸಾವು ಸಂಭವಿಸಿದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಶಿಂಧೆ ಅಲ್ಲಗಳೆದಿದ್ದಾರೆ.

ತನಿಖಾ ಸಮಿತಿಯ ವರದಿ ನಂತರ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ. ನಾವು ಈ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಔರಂಗಾಬಾದ್‌ನ ನಾಂದೇಡ್ ಮತ್ತು ಘಾಟಿಯಲ್ಲಿರುವ ಆಸ್ಪತ್ರೆಗಳಿಗೆ ಭೇಟಿ ನೀಡಿ ವರದಿ ಸಲ್ಲಿಸಲು ಸಚಿವರು, ಕಾರ್ಯದರ್ಶಿ ಮತ್ತು ಅಧಿಕಾರಿಗಳ ತಂಡವನ್ನು ಕಳುಹಿಸಿದ್ದೇವೆ ಎಂದು ಶಿಂಧೆ ಹೇಳಿದರು.

ಇನ್ನು ನಾಂದೇಡ್‌ ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರು, 16 ಶಿಶುಗಳು ಸೇರಿದಂತೆ 35 ಜನರ ಸಾವಿಗೆ ಔಷಧಿಗಳ ಕೊರತೆ ಮತ್ತು ವೈದ್ಯಕೀಯ ಸಿಬ್ಬಂದಿಯ ಅಲಭ್ಯತೆ ಕಾರಣ ಎಂದು ಆರೋಪಿಸಿದ್ದಾರೆ. 70 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ. ಅಜ್ಞಾತ ಕಾರಣಗಳಿಂದ ಔಷಧಿ ಪೂರೈಕೆ ಮತ್ತು ವೈದ್ಯರ ನೇಮಕಾತಿ ಸ್ಥಗಿತಗೊಂಡಿದೆ. ಹಲವಾರು ಜನರ ಪ್ರಾಣವನ್ನು ಕಳೆದುಕೊಂಡಿದೆ ಎಂದು ನಾವು ತಿಳಿದುಕೊಂಡಿದ್ದೇವೆ. ರಾಜ್ಯ ಸರ್ಕಾರ ಜವಾಬ್ದಾರಿಯನ್ನು ನಿಗದಿ ಪಡಿಸಿ ವ್ಯವಸ್ಥೆ ಸುಧಾರಿಸಬೇಕು ಎಂದರು.

ರಾಜ್ಯ ಸಾರ್ವಜನಿಕ ಆರೋಗ್ಯ ಇಲಾಖೆಯಿಂದ ಔಷಧಿಗಳ ಖರೀದಿಗೆ 40% ಕಮಿಷನ್ ಬೇಡಿಕೆಯಿರುವುದರಿಂದ ಔಷಧಿ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಆರೋಪಿಸಿದರು. ಇನ್ನು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನಡೆಸುವ ಸಿವಿಕ್ ಆಸ್ಪತ್ರೆಯಲ್ಲಿ ಈ ಹಿಂದೆ 17 ಜನರು ಸಾವನ್ನಪ್ಪಿದ್ದರು. ಆದರೆ ಅಂತಹ ದುರಂತಗಳಿಂದ ಇದುವರೆಗೆ ಸರ್ಕಾರ ಯಾವುದೇ ಪಾಠ ಕಲಿತಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಭ್ರಷ್ಟಾಚಾರದ ಕಾಯಿಲೆಯಿಂದ ಬಳಲುತ್ತಿದೆ. ಇಡೀ ವ್ಯವಸ್ಥೆ ವೆಂಟಿಲೇಟರ್‌ನಲ್ಲಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ವೈದ್ಯರು, ಸಿಬ್ಬಂದಿ ಇಲ್ಲದೇ ಔಷಧಗಳ ಕೊರತೆಯೂ ಇದೆ. ಆಸ್ಪತ್ರೆಗಳಲ್ಲಿನ ಉಪಕರಣಗಳು ಕಾರ್ಯನಿರ್ವಹಿಸದೆ ಖಾಲಿ ಬಿದ್ದಿವೆ. ಪ್ರಮುಖ ನಗರಗಳ ಆರೋಗ್ಯ ಸೇವೆಗಳ ಸ್ಥಿತಿ ಹೀಗಿದ್ದರೆ, ಗ್ರಾಮೀಣ ಆಸ್ಪತ್ರೆಗಳ ಸ್ಥಿತಿಯನ್ನೇ ಊಹಿಸಬಹುದು. ರಾಜ್ಯ ಸರ್ಕಾರದ ವಿರುದ್ಧ ಐಪಿಸಿ 302ರ ಅಡಿಯಲ್ಲಿ ತಪ್ಪಿತಸ್ಥ ನರಹತ್ಯೆ ಪ್ರಕರಣ ದಾಖಲಿಸಬೇಕು ಎಂದು ಪಟೋಲೆ ಆಗ್ರಹಿಸಿದರು.

ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಟ್ರಿಪಲ್ ಎಂಜಿನ್ ಸರ್ಕಾರವನ್ನು ಕಟುವಾಗಿ ಟೀಕಿಸಿದರು. ಇದು ಸಾಮಾನ್ಯ ಜನರಿಗೆ ಸಾರ್ವಜನಿಕ ಆರೋಗ್ಯವನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com