ನಾಂದೇಡ್ ಸರ್ಕಾರಿ ಆಸ್ಪತ್ರೆ ಡೀನ್, ವೈದ್ಯರ ವಿರುದ್ಧ ಕೊಲೆ ಪ್ರಕರಣ ದಾಖಲು

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ 16 ಮಕ್ಕಳು ಸೇರಿದಂತೆ 31 ರೋಗಿಗಳು ಸಾವನ್ನಪ್ಪಿದ್ದು, ಈ ಸಂಬಂಧ ಆಸ್ಪತ್ರೆಯ ಹಂಗಾಮಿ ಡೀನ್ ಮತ್ತು ವೈದ್ಯರ ವಿರುದ್ಧ ಪೊಲೀಸರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ 48 ಗಂಟೆಗಳಲ್ಲಿ 16 ಮಕ್ಕಳು ಸೇರಿದಂತೆ 31 ರೋಗಿಗಳು ಸಾವನ್ನಪ್ಪಿದ್ದು, ಈ ಸಂಬಂಧ ಆಸ್ಪತ್ರೆಯ ಹಂಗಾಮಿ ಡೀನ್ ಮತ್ತು ವೈದ್ಯರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಗುರುವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಂಕರರಾವ್ ಚವ್ಹಾಣ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಹಂಗಾಮಿ ಡೀನ್ ಎಸ್‌ಆರ್ ವಾಕೋಡೆ ಮತ್ತು ಮಕ್ಕಳ ತಜ್ಞ ವೈದ್ಯರ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.  ವ್ಯಕ್ತಿಯೊಬ್ಬರು ತಮ್ಮ ಮಗಳು ಮತ್ತು ಆಕೆಯ ನವಜಾತ ಶಿಶು ಸಾವನ್ನಪ್ಪಿದ ನಂತರ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಆಸ್ಪತ್ರೆಯ ಡೀನ್ ಮತ್ತು ವೈದ್ಯರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಮಾನವ ಹತ್ಯೆ) ಮತ್ತು ಸೆಕ್ಷನ್ 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಎಫ್ಐಆರ್ ಪ್ರಕಾರ, 21 ವರ್ಷದ ಗರ್ಭಿಣಿ ಅಂಜಲಿಯನ್ನು ಸೆಪ್ಟೆಂಬರ್ 30 ರಂದು ರಾತ್ರಿ 8 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಕ್ಟೋಬರ್ 1 ರಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಬಳಿಕ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಅಂಜಲಿಯ ತಂದೆ ಕಾಮಾಜಿ ತೋಂಪೆ ಅವರು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಬೆಳಗ್ಗೆ ಅಂಜಲಿಗೆ ರಕ್ತಸ್ರಾವ ಪ್ರಾರಂಭವಾಯಿತು ಮತ್ತು ಮಗು ಸಹ ಆರೋಗ್ಯವಾಗಿರಲಿಲ್ಲ. ಆದ್ದರಿಂದ ವೈದ್ಯರು ಕುಟುಂಬ ಸದಸ್ಯರಿಗೆ ಔಷಧಿಗಳು, ರಕ್ತ ಮತ್ತು ಇತರ ಅಗತ್ಯ ವಸ್ತುಗಳನ್ನು ಹೊರಗಿನಿಂದ ತರುವಂತೆ ಹೇಳಿದರು. ಆ ವಸ್ತುಗಳನ್ನು ತಂದಾಗ ವೈದ್ಯರು ವಾರ್ಡ್‌ನಲ್ಲೇ ಇರಲಿಲ್ಲ ಎಂದು ತೋಂಪೆ ಆರೋಪಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com