ನವದೆಹಲಿ: ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯಲ್ಲಿ ಇಸ್ರೇಲ್‌ನಿಂದ 212 ಭಾರತೀಯರಿದ್ದ ಮೊದಲ ವಿಮಾನ ಶುಕ್ರವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಬಂದಿಳಿಯಿತು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ವಾರಾಂತ್ಯದಲ್ಲಿ ಹಮಾಸ್ ಬಂಡುಕೋರರು ಇಸ್ರೇಲಿ ಪಟ್ಟಣಗಳ ಮೇಲೆ ನಡೆಸಿದ ಸರಣಿ ದಾಳಿಯಿಂದ ಅಲ್ಲಿ ಉದ್ವಿಗ್ನತೆ ಉಂಟಾಗಿದ್ದರಿಂದ ಸ್ವದೇಶಕ್ಕೆ ಹಿಂತಿರುಗಲು ಬಯಸುವ ಭಾರತೀಯರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಆಪರೇಷನ್ ಅಜಯ್ ಪ್ರಾರಂಭಿಸಿದೆ.
ನವದೆಹಲಿಗೆ ಬಂದಿಳಿದ ನಂತರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಇಸ್ರೇಲ್ ವಿದ್ಯಾರ್ಥಿ ಶುಭಂ ಕುಮಾರ್, "ನಾವು ಕೇಂದ್ರ ಸರ್ಕಾರ ಕೃತಜ್ಞರಾಗಿರುತ್ತೇವೆ. ಹೆಚ್ಚಿನ ವಿದ್ಯಾರ್ಥಿಗಳು ಸ್ವಲ್ಪ ಭಯಭೀತರಾಗಿದ್ದರು. ಭಾರತದ ರಾಯಭಾರ ಕಚೇರಿಯ ಮೂಲಕ ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಕೆಲವು ಅಧಿಸೂಚನೆಗಳು ಮತ್ತು ಲಿಂಕ್‌ಗಳನ್ನು ನೋಡಿದ ನಂತರ ನಮ್ಮ ಆತ್ಮಸ್ಥೈರ್ಯ ಹೆಚ್ಚಿತು. ಭಾರತದ ರಾಯಭಾರ ಕಚೇರಿಯ ಸಂಪರ್ಕದಿಂದ ಎಲ್ಲಾ ವ್ಯವಸ್ಥೆಗಳನ್ನು ಪಡೆದುಕೊಂಡೆವು ಎಂದು ತಿಳಿಸಿದರು.
ಇದಕ್ಕೂ ಮುನ್ನ ಗುರುವಾರ ಮಾತನಾಡಿದ ಎಂಇಎ ವಕ್ತಾರ ಅರಿಂದಮ್ ಬಾಗ್ಚಿ, ಭಾರತೀಯ ನಾಗರಿಕರನ್ನು ಕರೆದೊಯ್ಯಲು ಮೊದಲ ಚಾರ್ಟರ್ ವಿಮಾನ ಇಂದು ರಾತ್ರಿ ಟೆಲ್ ಅವಿವ್ ತಲುಪಲಿದೆ ಮತ್ತು ನಾಳೆ ಬೆಳಿಗ್ಗೆ ಭಾರತಕ್ಕೆ ಮರಳುವ ಸಾಧ್ಯತೆಯಿದೆ ಎಂದು ಹೇಳಿದ್ದರು. ಸುಮಾರು 18,000 ಭಾರತೀಯರು ಪ್ರಸ್ತುತ ಇಸ್ರೇಲ್‌ನಲ್ಲಿ ನೆಲೆಸಿದ್ದಾರೆ ಮತ್ತು ಸುಮಾರು ಒಂದು ಡಜನ್ ನಷ್ಟು ಜನರು ವೆಸ್ಟ್ ಬ್ಯಾಂಕ್‌ನಲ್ಲಿದ್ದಾರೆ ಮತ್ತು ಮೂರರಿಂದ ನಾಲ್ಕು ಜನರು ಗಾಜಾದಲ್ಲಿದ್ದಾರೆ ಎಂದು ಅವರು ತಿಳಿಸಿದ್ದರು.
Advertisement