ಹೈದರಾಬಾದ್: ತೆಲಂಗಾಣದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಸಾಮಾಜಿಕ ಭದ್ರತಾ ಪಿಂಚಣಿ ಮೊತ್ತವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ. ರೈತರಿಗೆ 'ರೈತು ಬಂಧು' ಹೂಡಿಕೆಯಡಿ ನೀಡುವ ಆರ್ಥಿಕ ಸಹಾಯವನ್ನು ಹೆಚ್ಚಿಸುವುದಲ್ಲದೆ 400 ರೂ.ಗೆ ಎಲ್‌ಪಿಜಿ ಸಿಲಿಂಡರ್ ಒದಗಿಸುವುದು ಸೇರಿದಂತೆ ಕೆಲವು ಭರವಸೆಗಳನ್ನು ನೀಡಿದೆ.
ಬಿಆರ್‌ಎಸ್ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್, ನವೆಂಬರ್ 30ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಎಲ್ಲಾ 93 ಲಕ್ಷ ಕುಟುಂಬಗಳಿಗೆ 5 ಲಕ್ಷ ರೂಪಾಯಿಗಳ ಜೀವ ವಿಮೆಯನ್ನು ಒದಗಿಸಲಾಗುವುದು ಎಂದು ಹೇಳಿದರು.
ಮುಂದಿನ ಐದು ವರ್ಷಗಳಲ್ಲಿ ಸಾಮಾಜಿಕ ಭದ್ರತಾ ಪಿಂಚಣಿಯನ್ನು ಪ್ರಸ್ತುತ 2,016 ರೂಪಾಯಿ ಇರುವುದನ್ನು ಹಂತಹಂತವಾಗಿ ತಿಂಗಳಿಗೆ 5,000 ರೂ.ಗೆ ಹೆಚ್ಚಿಸಲಾಗುವುದು ಎಂದು 'ಕೆಸಿಆರ್' ಎಂದೇ ಖ್ಯಾತರಾಗಿರುವ ಚಂದ್ರಶೇಖರ್ ರಾವ್ ಹೇಳಿದ್ದಾರೆ.
ಪ್ರಣಾಳಿಕೆ ಪ್ರಕಾರ ಬಿಆರ್‌ಎಸ್ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ 3,016 ರೂ.ಗೆ ಹೆಚ್ಚಿಸಲಾಗುವುದು, ನಂತರ ಮುಂದಿನ ನಾಲ್ಕು ವರ್ಷಗಳಲ್ಲಿ 5,000 ರೂಪಾಯಿಗೆ ಹೆಚ್ಚಿಸಲಾಗುವುದು. ಅದೇ ರೀತಿ ವಿಕಲಚೇತನರ ಪಿಂಚಣಿಯನ್ನು ಮುಂಬರುವ ಐದು ವರ್ಷಗಳಲ್ಲಿ ಈಗಿರುವ 4,016 ರೂ.ಗಳಿಂದ 6,016 ರೂ.ಗೆ ಹೆಚ್ಚಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
'ರೈತು ಬಂಧು' ಯೋಜನೆಯಡಿ ರೈತರಿಗೆ ಪ್ರತಿ ಎಕರೆಗೆ ವರ್ಷಕ್ಕೆ 10 ಸಾವಿರ ರೂಪಾಯಿ ಸಿಗುತ್ತಿದ್ದು, ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಎಕರೆಗೆ 16 ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ.
BRS ಅಧಿಕಾರಕ್ಕೆ ಬಂದ ನಂತರ 400 ರೂ.ಗೆ 'ಅರ್ಹ ಫಲಾನುಭವಿಗಳಿಗೆ' ಗ್ಯಾಸ್ ಸಿಲಿಂಡರ್ಗಳನ್ನು ಒದಗಿಸುತ್ತದೆ ಮತ್ತು ಉಳಿದ ಮೊತ್ತವನ್ನು ರಾಜ್ಯ ಸರ್ಕಾರವು ಭರಿಸಲಿದೆ ಎಂದು ಅದು ಹೇಳಿದೆ.
ಬಿಆರ್‌ಎಸ್ ಪ್ರಣಾಳಿಕೆಯಲ್ಲಿ 'ಆರೋಗ್ಯ ಶ್ರೀ' ಆರೋಗ್ಯ ಯೋಜನೆಯಡಿ ಆರೋಗ್ಯ ವಿಮಾ ರಕ್ಷಣೆಯನ್ನು 15 ಲಕ್ಷ ರೂ.ಗೆ ಹೆಚ್ಚಿಸುವ ಭರವಸೆ ನೀಡಲಾಗಿದೆ. ಅದು ಪ್ರಸ್ತುತ 5 ಲಕ್ಷ ರೂಪಾಯಿ ಇದೆ. ಸರ್ಕಾರ ರಚನೆಯಾದ ಆರರಿಂದ ಏಳು ತಿಂಗಳೊಳಗೆ ಬಿಆರ್‌ಎಸ್ ಘೋಷಿಸಿದ ಭರವಸೆಗಳನ್ನು ಜಾರಿಗೆ ತರಲಾಗುವುದು ಎಂದು ರಾವ್ ಹೇಳಿದರು.
Advertisement