ಶ್ರೀಹರಿಕೋಟ: ಇಸ್ರೊ ಬಾಹ್ಯಾಕಾಶ ಕೇಂದ್ರದ ಗಗನ್ಯಾನ್‌ನ ಮೊದಲ ಪರೀಕ್ಷಾರ್ಥ ಉಡಾವಣಾ ವಾಹಕ ವೆಹಿಕಲ್ ಅಬಾರ್ಟ್ ಮಿಷನ್-1 (TV-D1) ಉಡಾವಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.ಗಗನ್ಯಾನ್‌ನ ಮೊದಲ ಪರೀಕ್ಷಾರ್ಥ ಉಡಾವಣಾ ವಾಹನ ಅಬಾರ್ಟ್ ಮಿಷನ್-1 (ಟಿವಿ-ಡಿ1) ಉಡಾವಣೆಯನ್ನು 5 ಸೆಕೆಂಡುಗಳಲ್ಲಿ ತಡೆಹಿಡಿಯಲಾಗಿದೆ ಎಂದು ಇಸ್ರೊ ಅಧ್ಯಕ್ಷ ಎಸ್ ಸೋಮನಾಥ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಉಡಾವಣಾ ವಾಹನವನ್ನು ಇಂದು ಮೇಲೆತ್ತುವ ಪ್ರಯತ್ನ ಸಾಧ್ಯವಾಗಲಿಲ್ಲ. ಸರಿಯಾದ ಸಮಯದಲ್ಲಿ ರಾಕೆಟ್ ಪ್ರಜ್ವಲನ ಸಾಧ್ಯವಾಗದೇ ಉಡಾವಣೆ ಸ್ಥಗಿತಗೊಳಿಸಲಾಗಿದೆ. ಏನು ತಪ್ಪಾಗಿದೆ ಎಂಬುದನ್ನು ನಾವು ಕಂಡುಹಿಡಿಯಬೇಕು. ವಾಹನ ಸುರಕ್ಷಿತವಾಗಿದೆ, ಏನಾಗಿದೆ ಎಂದು ನೋಡಬೇಕಾಗಿದೆ. ಶೀಘ್ರದಲ್ಲೇ ಕಾರ್ಯಾಚರಣೆ ನಡೆಸುತ್ತೇವೆ ಎಂಬ ವಿಶ್ವಾಸವಿದೆ. ಇದರ ಕಾರ್ಯನಿರ್ವಹಣೆ ಮಾಡುತ್ತಿರುವ ಕಂಪ್ಯೂಟರ್ ಉಡಾವಣೆಯನ್ನು ತಡೆಹಿಡಿದಿದೆ. ಅದನ್ನು ಸರಿಪಡಿಸಿ ಶೀಘ್ರವೇ ಉಡಾವಣೆ ಮಾಡುತ್ತೇವೆ ಎಂಬ ವಿಶ್ವಾಸವಿದೆ ಎಂದರು.
ಟೆಸ್ಟ್ ವೆಹಿಕಲ್ ಡೆವೆಲಪ್ ಮೆಂಟ್ ಫ್ಲೈಟ್ ಮಿಷನ್(TV-D1) ಎಂದು ಕರೆಯಲ್ಪಡುವ ಮೊದಲ ಮಾನವರಹಿತ ಪರೀಕ್ಷಾರ್ಥ ಉಡಾವಣೆ ಆಂಧ್ರ ಪ್ರದೇಶದ ಶ್ರೀಹರಿಕೋಟದಿಂದ ಇಂದು ಬೆಳಗ್ಗೆ 8 ಗಂಟೆಗೆ ಉಡಾವಣೆಯಾಗಬೇಕಾಗಿತ್ತು. ಪ್ರತಿಕೂಲ ಹವಾಮಾನದಿಂದಾಗಿ ಇಸ್ರೊ ಸಂಸ್ಥೆ ಬೆಳಗ್ಗೆ 8.30ಕ್ಕೆ ಉಡಾವಣೆಯನ್ನು ಮುಂದೂಡಿತು. ಆದರೆ ನಂತರ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಗಗನಯಾನ ಮಿಷನ್ ನ ಭಾಗವಾಗಿ ಕ್ರ್ಯೂ ಎಸ್ಕೇಪ್ ಸಿಸ್ಟಮ್ ನ ಕೆಲಸ ಹಾಗೂ ವ್ಯವಸ್ಥೆಯನ್ನು ಈ ಪರೀಕ್ಷಾರ್ಥ ಉಡಾವಣಾ ವಾಹನ ಪ್ರದರ್ಶಿಸುತ್ತದೆ. ರಾಕೆಟ್ ಉಡಾವಣೆ ನಂತರ ಅದು ಬಂಗಾಳಕೊಲ್ಲಿಯಲ್ಲಿ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗುವುದನ್ನು ಸಹ ಈ ಉಡಾವಣಾ ವಾಹನ ಪರೀಕ್ಷಿಸುತ್ತದೆ.
Advertisement