ಫೆಮಾ ಪ್ರಕರಣ: ರಾಜಸ್ಥಾನ ಸಿಎಂ ಗೆಹ್ಲೋಟ್ ಪುತ್ರನಿಗೆ ಇಡಿ ಸಮನ್ಸ್
ಜೈಪುರ: ವಿದೇಶಿ ವಿನಿಮಯ ಕಾನೂನು(ಫೆಮಾ) ಉಲ್ಲಂಘಿಸಿದ ಪ್ರಕರಣದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.
ಶುಕ್ರವಾರ ಜೈಪುರ ಅಥವಾ ನವದೆಹಲಿಯಲ್ಲಿರುವ ಫೆಡರಲ್ ಏಜೆನ್ಸಿಯ ಕಚೇರಿಯ ಮುಂದೆ ವಿಚಾರಣೆಗೆ ಹಾಜರಾಗುವಂತೆ ವೈಭವ್ ಗೆಹ್ಲೋಟ್ ಅವರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜಸ್ಥಾನ ಮೂಲದ ಹಾಸ್ಪಿಟಾಲಿಟಿ ಗ್ರೂಪ್ ಟ್ರಿಟಾನ್ ಹೋಟೆಲ್ಸ್ & ರೆಸಾರ್ಟ್ಸ್ ಪ್ರೈವೇಟ್ ಲಿಮಿಟೆಡ್, ವರ್ಧಾ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅದರ ನಿರ್ದೇಶಕ ಹಾಗೂ ಪ್ರವರ್ತಕರಾದ ಶಿವಶಂಕರ್ ಶರ್ಮಾ, ರತ್ತನ್ ಕಾಂತ್ ಶರ್ಮಾ ಮತ್ತು ಇತರರ ವಿರುದ್ಧದ ಇತ್ತೀಚಿನ ಇಡಿ ದಾಳಿಗೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿದೆ.
ಕಳೆದ ಆಗಸ್ಟ್‌ನಲ್ಲಿ ಜೈಪುರ, ಉದಯಪುರ, ಮುಂಬೈ ಮತ್ತು ದೆಹಲಿಯಲ್ಲಿ ದಾಳೆ ನಡೆಸಿದ್ದ ಇಡಿ ಅಧಿಕಾರಿಗಳು ಮೂರು ದಿನಗಳ ತೀವ್ರ ಶೋಧ ನಡೆಸಿದ್ದರು.
ರತ್ತನ್ ಕಾಂತ್ ಶರ್ಮಾ ಅವರು ವೈಭವ್ ಗೆಹ್ಲೋಟ್ ಅವರೊಂದಿಗಿನ ಸಂಪರ್ಕವನ್ನು ಇಡಿ ಪರಿಶೀಲಿಸಿದ್ದು, ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ(ಫೆಮಾ) ಅಡಿಯಲ್ಲಿ ಅವರ ಹೇಳಿಕೆ ದಾಖಲಿಸಲು ವಿಚಾರಣೆಗೆ ಕರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ