ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಹಪಾಠಿಗಳ ಸಮ್ಮುಖದಲ್ಲೇ ಶಾಲೆಯ ಹೊರಗೆ ತಮ್ಮ ಶಿಕ್ಷಕನ ಮೇಲೆಯೇ ಗುಂಡು ಹಾರಿಸಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತ ಸೋದರಸಂಬಂಧಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಕಮಿಷನರ್ ರಾಮಕೃಷ್ಣ ಸ್ವರ್ಣಕರ್ ಅವರು ಮಾತನಾಡಿ, ಚೌಬೆಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕ ಗುರುವಾರ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಗದರಿಸಿದ್ದರು ಮತ್ತು ಹೊಡೆದಿದ್ದರು. ಇದರಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ವಿದ್ಯಾರ್ಥಿಯೊಬ್ಬ ತನ್ನ ಸೋದರಸಂಬಂಧಿಯೊಂದಿಗೆ ಸೇರಿ ರಸಾಯನಶಾಸ್ತ್ರದ ಶಿಕ್ಷಕ ವಿಕಾಸ್ ತಿವಾರಿ ಮೇಲೆ ಹಲ್ಲೆ ನಡೆಸಲು ಪ್ಲಾನ್ ಮಾಡಿದ್ದರು” ಎಂದು ಹೇಳಿದ್ದಾರೆ.
ಪೊಲೀಸರ ಪ್ರಕಾರ, 15 ಮತ್ತು 16 ವರ್ಷದ ಇಬ್ಬರು ಸೋದರಸಂಬಂಧಿಗಳು ಕಂಟ್ರಿಮೇಡ್ ಪಿಸ್ತೂಲ್ ನೊಂದಿಗೆ ಶುಕ್ರವಾರ ಬೆಳಗ್ಗೆ 7.30 ರ ಸುಮಾರಿಗೆ ಶಾಲೆಗೆ ಆಗಮಿಸಿ, ಶಿಕ್ಷಕ ತಿವಾರಿ ಬರುವವರೆಗೆ ಕಾಯುತ್ತಿದ್ದರು.
"ತಿವಾರಿ ಅವರು ಶಾಲೆಗೆ ಬಂದಾಗ, ಇಬ್ಬರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ದಾಳಿಯಲ್ಲಿ ತಿವಾರಿ ಅವರಿಗೆ ಕೆಲವು ಗಾಯಗಳಾಗಿವೆ. ಅದೃಷ್ಟವಶಾತ್ಪ್ರಾಣಾಪಾಯಿಂದ ಪಾರಾಗಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಇಬ್ಬರೂ ಅಪ್ರಾಪ್ತರನ್ನು ಮತ್ತು ಅವರ ಇಬ್ಬರು ಸಂಬಂಧಿಕರಾದ ವಿವೇಕ್ ಮತ್ತು ಇಂದ್ರೇಶ್ ಯಾದವ್ ಅವರನ್ನು ಬಂಧಿಸಿದ್ದಾರೆ.
Advertisement