ನವದೆಹಲಿ: ಕೇಂದ್ರ ಸರ್ಕಾರ ಮತ್ತು ಬಿಜೆಪಿ ವಿರುದ್ಧ ಕೆಲವು ವಿರೋಧ ಪಕ್ಷದ ನಾಯಕರು ಮತ್ತೊಮ್ಮೆ ಬೇಹುಗಾರಿಕೆಯ ಗಂಭೀರ ಆರೋಪ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಶಿವಸೇನೆಯ (ಯುಬಿಟಿ) ಪ್ರಿಯಾಂಕಾ ಚತುರ್ವೇದಿ ಮತ್ತು ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಪವನ್ ಖೇರಾ ಅವರು ತಮಗೆ ಬಂದಿರುವ ಎಚ್ಚರಿಕೆ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.
ವಿಪಕ್ಷ ನಾಯಕರು ಶೇರ್ ಮಾಡಿರುವ ಆಪಲ್ ಅಲರ್ಟ್ ನೋಟಿಫಿಕೇಷನ್ ಕುರಿತಂತೆ ಆಪಲ್ ಕಂಪನಿ ಸ್ಪಷ್ಟಿಕರಣ ನೀಡಿದೆ. ವಿಪಕ್ಷ ನಾಯಕರು ಮಾಡಿರುವ ಬೇಹುಗಾರಿಕೆಯ ಆರೋಪವನ್ನು ಯಾವುದೇ ನಿರ್ದಿಷ್ಟ ಸರ್ಕಾರಿ ಪ್ರಾಯೋಜಿತ ದಾಳಿ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
ವಾಸ್ತವವಾಗಿ, ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಕೆಸಿ ವೇಣುಗೋಪಾಲ್, ಪವನ್ ಖೇಡಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಶಿವಸೇನೆ (ಯುಬಿಟಿ) ಸಂಸದ ಪ್ರಿಯಾಂಕಾ ಚತುರ್ವೇದಿ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವು ನಾಯಕರು ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಮೊಬೈಲ್ ಕಂಪನಿ (ಆಪಲ್) ಅವುಗಳನ್ನು ಕಳುಹಿಸಿದೆ ಎಂದು ಹೇಳಿದ್ದಾರೆ. ಎಚ್ಚರಿಕೆಯ ಸಂದೇಶ, ಸರ್ಕಾರಿ ಪ್ರಾಯೋಜಿತ ದಾಳಿಗಳನ್ನು ಪ್ರತಿಪಾದಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಅಷ್ಟೇ ಅಲ್ಲ, ತಮ್ಮ ಕಚೇರಿಯಲ್ಲಿರುವ ಎಲ್ಲರಿಗೂ ಆಪಲ್‌ನಿಂದ ಈ ಸೂಚನೆ ಬಂದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೊಂಡಿದ್ದಾರೆ. ಅದರ ನಂತರ ಇದೀಗ ಈ ಸಂಪೂರ್ಣ ವಿಷಯದಲ್ಲಿ ಮೊಬೈಲ್ ಕಂಪನಿ ಆಪಲ್ ಪ್ರತಿಕ್ರಿಯೆ ಬೆಳಕಿಗೆ ಬಂದಿದೆ.
'ಎಚ್ಚರಿಕೆಗಳು ಕೆಲವೊಮ್ಮೆ ತಪ್ಪಾಗಬಹುದು'
ದೇಶದಲ್ಲಿನ ಕೆಲವು ವಿರೋಧ ಪಕ್ಷದ ನಾಯಕರ ಫೋನ್‌ಗಳಲ್ಲಿನ 'ಸರ್ಕಾರಿ ಪ್ರಾಯೋಜಿತ' ದಾಳಿಕೋರರ ಕುರಿತು ಆಪಲ್ ಕಂಪನಿಯು ಸ್ಪಷ್ಟನೆ ನೀಡಿದ್ದು, 'ಅಂತಹ ದಾಳಿಗಳನ್ನು ಪತ್ತೆಹಚ್ಚುವುದು ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಅದು ಸಾಮಾನ್ಯವಾಗಿ ಅಪೂರ್ಣವಾಗಿರುತ್ತದೆ. ಕೆಲವು ಆಪಲ್ ಬೆದರಿಕೆ ಅಧಿಸೂಚನೆಗಳು ಸುಳ್ಳು ಎಚ್ಚರಿಕೆಗಳಾಗಿರಬಹುದು ಅಥವಾ ಕೆಲವು ದಾಳಿಗಳು ಪತ್ತೆಯಾಗಿಲ್ಲ ಎಂದು ಅದು ಹೇಳಿದೆ.
Advertisement