ವಿಜಯವಾಡ: ಆಂಧ್ರಪ್ರದೇಶ ಅಪರಾಧ ತನಿಖಾ ಇಲಾಖೆ(ಎಪಿಸಿಐಡಿ) ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ವಿರುದ್ಧ ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣ ದಾಖಲಿಸಿದೆ. ಇದು ನಾಯ್ಡು ವಿರುದ್ಧ ರಾಜ್ಯ ತನಿಖಾ ಸಂಸ್ಥೆ ದಾಖಲಿಸಿ ನಾಲ್ಕನೇ ಪ್ರಕರಣವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಸೋಮವಾರ ಎಸಿಬಿ ವಿಶೇಷ ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಿದ್ದಾರೆ. ನಾಯ್ಡು, ಮಾಜಿ ಅಬಕಾರಿ ಸಚಿವ ಕೊಲ್ಲು ರವೀಂದ್ರ ಮತ್ತು ಆಂಧ್ರಪ್ರದೇಶ ಸ್ಟೇಟ್ ಬೆವರೇಜಸ್ ಕಾರ್ಪೊರೇಷನ್ ಲಿಮಿಟೆಡ್ (ಎಪಿಎಸ್‌ಬಿಸಿಎಲ್) ಮಾಜಿ ಕಮಿಷನರ್ ನರೇಶ್ ವಿರುದ್ಧ, ಕೆಲವು ಪೂರೈಕೆದಾರರು ಮತ್ತು ಡಿಸ್ಟಿಲರಿಗಳಿಗೆ ಅನುಕೂಲ ಮಾಡಿಕೊಟ್ಟು, ಮದ್ಯದ ಪರವಾನಗಿ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ.
ಸಿಐಡಿ ಅಧಿಕಾರಿಗಳು ಅಕ್ಟೋಬರ್ 28 ರಂದು ಐಪಿಸಿ ಸೆಕ್ಷನ್ 166, 167, 409, 120(ಬಿ) ಆರ್/ಡಬ್ಲ್ಯೂ 34 ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13 (1)(ಡಿ) ಆರ್/ಡಬ್ಲ್ಯು 13(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸಂಬಂಧ ಎಪಿಎಸ್‌ಬಿಸಿಎಲ್ ಆಯುಕ್ತ ಡಿ ವಾಸುದೇವ ರೆಡ್ಡಿ ಅವರು ದೂರು ನೀಡಿದ್ದು, ಎಫ್‌ಐಆರ್‌ನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಎ3, ಕೊಲ್ಲು ರವೀಂದ್ರ ಅವರನ್ನು ಎ2 ಮತ್ತು ನರೇಶ್ ಅವರನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
ದೂರಿನ ಪ್ರಕಾರ, 2014-2019ರ ಅವಧಿಯಲ್ಲಿ ಅಂದಿನ ಎಪಿಎಸ್‌ಬಿಸಿಎಲ್‌ನ ಆಯುಕ್ತರು ರಾಜ್ಯದ ಆದಾಯವನ್ನು ಪರಿಶೀಲಿಸುವಾಗ ಹಿಂದಿನ ಸರ್ಕಾರದ ನೀತಿ ನಿರ್ಧಾರಗಳಲ್ಲಿ ಹಲವಾರು ವ್ಯತ್ಯಾಸಗಳನ್ನು ಮಾಡಿದ್ದಾರೆ. ರಾಜ್ಯ ಸರ್ಕಾರ ರಚಿಸಿದ ಸಮಿತಿಯ ಶಿಫಾರಸುಗಳಿಗೆ ವಿರುದ್ಧವಾಗಿ ಅಕ್ರಮವಾಗಿ ಲೆಟರ್ ಆಫ್ ಇಂಟೆಂಟ್(LOI) ನೀಡುವ ಮೂಲಕ ಕೆಲವು ಡಿಸ್ಟಿಲರಿಗಳಿಗೆ ಅನುಕೂಲ ಮಾಡಿಕೊಟ್ಟಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ.
Advertisement