ತಿರುವನಂತಪುರ: ವಿವಿಧ ಗುಂಪುಗಳ ಮಧ್ಯೆ ಭಿನ್ನಾಭಿಪ್ರಾಯ ಹೆಚ್ಚಾಗುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಿರುದ್ಧ ಕೇಸು ದಾಖಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಕೇಂದ್ರ ಸಚಿವರ ಹೇಳಿಕೆಯನ್ನಾಧರಿಸಿ ಕೇರಳ ಪೊಲೀಸರು ಸ್ವಯಂ ಪ್ರೇರಿತವಾಗಿ ಎಫ್ಐಆರ್ ದಾಖಲಿಸಿದ್ದಾರೆ. ರಾಜೀವ್ ಚಂದ್ರಶೇಖರ್ ಅವರು ಕೊಚ್ಚಿ ಸ್ಫೋಟ ಮತ್ತು ಹಮಾಸ್ ನಾಯಕರ ವಿರುದ್ಧ ಮಲಪ್ಪುರಂ ಜಿಲ್ಲೆಯಲ್ಲಿ ಇಸ್ಲಾಂ ಗುಂಪೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವರ್ಚುವಲ್ ಭಾಷಣ ಮಾಡುವ ಸಂದರ್ಭದಲ್ಲಿ ನೀಡಿದ್ದ ಹೇಳಿಕೆ ವಿರುದ್ಧ ಕೇಸು ದಾಖಲಾಗಿದೆ.
ಧರ್ಮ, ಬಣ್ಣ, ಹುಟ್ಟಿನ ಸ್ಥಳಗಳನ್ನು ಆಧರಿಸಿ ರಾಜೀವ್ ಚಂದ್ರಶೇಖರ್ ಅವರ ವಿರುದ್ಧ ಎಫ್ಐಆರ್ ನ್ನು ಸೆಕ್ಷನ್ 153ಎ ಅಡಿಯಲ್ಲಿ ದಾಖಲಿಸಲಾಗಿದೆ ಎಂದು ಕೇರಳದ ಕೊಚ್ಚಿ ಪೊಲೀಸರು ತಿಳಿಸಿದ್ದಾರೆ. ಕೇರಳ ಪೊಲೀಸ್ ಕಾಯ್ದೆಯನ್ನು ಅವರ ವಿರುದ್ಧ ದಾಖಲಿಸಲಾಗಿದೆ.
ಕೇರಳ ಬಿಜೆಪಿ ಆರೋಪ: ಕೇರಳದ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಅವರು ಪಿಣರಾಯಿ ವಿಜಯನ್ ಸರ್ಕಾರದ ಈ ಕ್ರಮವು ವಿಭಜಕ ಶಕ್ತಿಗಳು ಮತ್ತು ಉಗ್ರಗಾಮಿ ದೃಷ್ಟಿಕೋನ ಹೊಂದಿರುವವರಿಗೆ ಸಹಾಯ ಮಾಡುವ ಪ್ರೋತ್ಸಾಹ ನೀಡುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದ್ದಾರೆ.
ತಿರುವನಂತಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಪಿಣರಾಯಿ ವಿಜಯನ್ ಸರ್ಕಾರದ ದ್ವಂದ್ವ ನೀತಿಯನ್ನು ಸೂಚಿಸುತ್ತದೆ. ಕೇಂದ್ರ ಸಚಿವರ ವಿರುದ್ಧದ ಪ್ರಕರಣವನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸುವುದಾಗಿ ಪಕ್ಷ ಹೇಳಿದೆ.
ಐಪಿಸಿಯ ಸೆಕ್ಷನ್ 153ಎ (ಧರ್ಮ, ಜನಾಂಗ, ಜನ್ಮ ಸ್ಥಳ, ವಾಸಸ್ಥಳದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು ಸೆಕ್ಷನ್ 120 (ಒ) (ಸಾರ್ವಜನಿಕ ಸುವ್ಯವಸ್ಥೆಗೆ ತೊಂದರೆ ಮತ್ತು ಉಲ್ಲಂಘನೆಯನ್ನು ಉಂಟುಮಾಡುವುದು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕೊಚ್ಚಿ ನಗರ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊಚ್ಚಿ ಬಾಂಬ್ ಸ್ಫೋಟವನ್ನು 'ಭಯೋತ್ಪಾದಕ ಕೃತ್ಯ' ಎಂದು ಕರೆದಿದ್ದಕ್ಕಾಗಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಎಂ ವಿ ಗೋವಿಂದನ್ ವಿರುದ್ಧ ಪ್ರಕರಣ ದಾಖಲಿಸದ ಎಡ ಸರ್ಕಾರ ಮತ್ತು ಪೊಲೀಸರನ್ನು ಸುರೇಂದ್ರನ್ ಟೀಕಿಸಿದ್ದಾರೆ.
Advertisement