ಪಂಜಾಬ್: 13,000 ಪಂಚಾಯತ್‌ಗಳ ವಿಸರ್ಜನೆ ಆದೇಶ ವಾಪಸ್; ಇಬ್ಬರು ಐಎಎಸ್ ಅಧಿಕಾರಿಗಳ ಅಮಾನತು
ಚಂಡೀಗಢ: 13,000ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳ ವಿಸರ್ಜನೆಗೆ ಸಂಬಂಧಿಸಿದ ತನ್ನ ಅಧಿಸೂಚನೆಯನ್ನು ಹಿಂಪಡೆಯುವುದಾಗಿ ಆಪ್ ಸರ್ಕಾರ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ಗೆ ತಿಳಿಸಿದ ಒಂದು ದಿನದ ನಂತರ, ಶುಕ್ರವಾರ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
"ತಾಂತ್ರಿಕವಾಗಿ ದೋಷಪೂರಿತ" ನಿರ್ಧಾರ ತೆಗೆದುಕೊಂಡ ಆರೋಪದ ಮೇಲೆ ಗ್ರಾಮೀಣಾಭಿವೃದ್ಧಿ ಹಣಕಾಸು ಆಯುಕ್ತ ಡಿ.ಕೆ.ತಿವಾರಿ ಮತ್ತು ಗ್ರಾಮೀಣಾಭಿವೃದ್ಧಿ ನಿರ್ದೇಶಕ ಗುರುಪ್ರೀತ್ ಸಿಂಗ್ ಖೈರಾ ಅವರನ್ನು ಪಂಜಾಬ್ ಸರ್ಕಾರ ಅಮಾನತುಗೊಳಿಸಿದೆ. ರಾಜ್ಯ ಸರ್ಕಾರದ ಈ ಕ್ರಮ, ಅಧಿಕಾರಶಾಹಿ ಮತ್ತು ರಾಜಕೀಯ ನಾಯಕರ ನಡುವೆ ಕೋಲಾಹಲವನ್ನು ಸೃಷ್ಟಿಸಿದೆ.
ಇಂದು ಬೆಳಗ್ಗೆ ಬಹಿರಂಗವಾದ ಪಂಚಾಯತ್‌ಗಳ ವಿಸರ್ಜನೆಗೆ ಸಂಬಂಧಿಸಿದ ಕಡತದ ಪ್ರತಿಯಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಲಾಲ್ಜಿತ್ ಭುಲ್ಲಾರ್ ಹಾಗೂ ಇಬ್ಬರೂ ಐಎಎಸ್ ಅಧಿಕಾರಿಗಳ ಸಹಿ ಇದೆ.
ಏತನ್ಮಧ್ಯೆ, ಪ್ರತಿಪಕ್ಷ ಶಿರೋಮಣಿ ಅಕಾಲಿದಳ(ಎಸ್‌ಎಡಿ), ಕೇವಲ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು ಸಚಿವರನ್ನು ಏಕೆ ರಕ್ಷಿಸಲಾಗಿದೆ ಎಂದು ಸರ್ಕಾರವನ್ನು ಪ್ರಶ್ನಿಸಿದೆ.
ಆದರೆ, ಅಧಿಕಾರಿಗಳು ಕಡತದಲ್ಲಿ ಉಲ್ಲೇಖಿಸಿದ್ದನ್ನು ಮಾತ್ರ ಮುಖ್ಯಮಂತ್ರಿ ಮತ್ತು ಸಚಿವರು ಅನುಮೋದಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ