ನಾವು ಅವಧಿಪೂರ್ವ ಚುನಾವಣೆ ಸಾಧ್ಯತೆಗೆ ತಯಾರಿರಬೇಕು: ನಿತೀಶ್ ಕುಮಾರ್
ಮುಂಬೈ: ಬಿಜೆಪಿ ಎದುರಾಳಿ ಮೈತ್ರಿಕೂಟದ ನಾಯಕರಲ್ಲಿ ಪ್ರಮುಖರಾಗಿರುವ ಬಿಹಾರ ಸಿಎಂ ಅವಧಿಪೂರ್ವ ಚುನಾವಣೆ ಸಾಧ್ಯತೆಗೆ ತಯಾರಾಗಿರಬೇಕು ಎಂದು ಹೇಳಿದ್ದಾರೆ.
ಮುಂಬೈ ನಲ್ಲಿ ಎರಡು ದಿನಗಳ ಕಾಲ ನಡೆದ ಇಂಡಿಯಾ ಮೈತ್ರಿಕೂಟದ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್, ಯಾವಾಗ ಚುನಾವಣೆ ನಡೆದರೂ ಬಿಜೆಪಿಯನ್ನು ವಿಪಕ್ಷಗಳ ಮೈತ್ರಿಕೂಟ ಮಣಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ದೇಶದ ಇತಿಹಾಸವನ್ನು ಬದಲಿಸಲು ಬಯಸುತ್ತಿದೆ. ಆದರೆ ನಮ್ಮ ಉದ್ದೇಶ ದೇಶವನ್ನು ಬಲಿಷ್ಠಗೊಳಿಸುವುದು ಹಾಗೂ ಸಮಾಜದ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಯನ್ನು ಖಚಿತಪಡಿಸುವುದಾಗಿದೆ. ನಾವು ವೇಗವಾಗಿ ಚಲಿಸುತ್ತಿದ್ದೇವೆ. ಚುನಾವಣೆಗಳು (ಲೋಕಸಭೆಗೆ) ಮುಂಚೆಯೇ ನಡೆಯಬಹುದು ಮತ್ತು ನಾವು ಜಾಗರೂಕರಾಗಿರಬೇಕು, ”ಎಂದು ಜನತಾ ದಳ-ಯುನೈಟೆಡ್ ನಾಯಕರೂ ಆಗಿರುವ ನಿತೀಶ್ ಹೇಳಿದ್ದಾರೆ.
ಅವಧಿ ಪೂರ್ವ ಚುನಾವಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಒಂದು ದೇಶ ಒಂದು ಚುನಾವಣೆ ಕುರಿತು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ರಚನೆಯಾದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಹೇಳಿಕೆ ಮಹತ್ವ ಪಡೆದುಕೊಂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ