ಚೆನ್ನೈ: ಮುಂದಿನ ವರ್ಷದ ಜನವರಿ ವೇಳೆಗೆ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಅಶೋಕ್ ಲೇಲ್ಯಾಂಡ್ ಲಿಮಿಟೆಡ್‌ನ ರಜತ ಮಹೋತ್ಸವನ್ನುದ್ದೇಶಿಸಿ ಮಾತನಾಡಿದ ನಿತಿನ್ ಗಡ್ಕರಿ, ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ್ದು, ಈ ವರ್ಷಾಂತ್ಯ ಅಥವಾ ಜನವರಿ 2024 ರ ವೇಳೆಗೆ ಕಾರ್ಯಾರಂಭವಾಗಲಿದೆ ಎಂದರು.
36 ಗ್ರೀನ್ ಎಕ್ಸ್ ಪ್ರೆಸ್ ಹೆದ್ದಾರಿ ಅಭಿವೃದ್ಧಿಪಡಿಸುತ್ತಿದ್ದು, ಚೆನ್ನೈಯಿಂದ ದೆಹಲಿಯನ್ನು ಸಂಪರ್ಕಿಸಲಾಗುತ್ತಿದೆ. ಚೆನ್ನೈನಲ್ಲಿ ಯೋಜನೆಯ ಪ್ರಗತಿ ಪರಿಶೀಲಿಸಿದ್ದು, ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ಹೈವೆಯಲ್ಲಿ ಐಷಾರಾಮಿ ಬಸ್‌ಗಳು ಮತ್ತು ಸ್ಲೀಪರ್ ಕೋಚ್‌ಗಳನ್ನು ಪ್ರಾರಂಭಿಸಬಹುದು. ಇಂಧನ ವೆಚ್ಚ ಕಡಿಮೆಯಾಗಿದ್ದು, ಟಿಕೆಟ್ ದರವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಬಹುದು ಎಂದು ಅವರು ತಿಳಿಸಿದರು.
ಮನಾಲಿಯಿಂದ ಲಡಾಖ್ ಮತ್ತು ಲೇಹ್ ವರೆಗೆ ನಾವು ಈಗಾಗಲೇ 5-6 ಸುರಂಗಗಳು ಮತ್ತು ರಸ್ತೆಗಳನ್ನು ಮಾಡುತ್ತಿದ್ದೇವೆ. ಏಷ್ಯಾದ ಅತಿ ಉದ್ದದ ಸುರಂಗ (11.8 ಕಿ.ಮೀ) ಆಗಲಿರುವ ಝೋಜಿ-ಲಾ ಸುರಂಗ ಮಾರ್ಗ ನಿರ್ಮಾಣದಲ್ಲಿ ಶೇ. 70 ರಷ್ಟು ಕೆಲಸ ಪೂರ್ಣಗೊಂಡಿದೆ. ಶ್ರೀ ನಗರದಿಂದ ಜಮ್ಮುವಿಗೆ 18 ಸುರಂಗ ಮಾರ್ಗ ನಿರ್ಮಾಣ ಮಾಡಲಾಗುತ್ತಿದ್ದು, ಈ ಪೈಕಿ 14 ಸುರಂಗಗಳು ಈಗಾಗಲೇ ಪೂರ್ಣಗೊಂಡಿವೆ. ಸೂರತ್, ನಾಸಿಕ್, ಅಹ್ಮದ್‌ನಗರ, ಕರ್ನೂಲ್, ಚೆನ್ನೈ (ಮತ್ತು ಅದರಾಚೆ), ಕನ್ಯಾಕುಮಾರಿ, ತಿರುವನಂತಪುರಂ, ಕೊಚ್ಚಿ ಮತ್ತು ಬೆಂಗಳೂರು ಮತ್ತು ಹೈದರಾಬಾದ್ ಮೂಲಕ ದೆಹಲಿಯಿಂದ ಚೆನ್ನೈ ಸಂಪರ್ಕಿಸಲಾಗುತ್ತಿದೆ ಎಂದು ಗಡ್ಕರಿ ಹೇಳಿದರು. .
ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದವು ಸುಮಾರು ಶೇ. 59 ರಷ್ಟು ಹೆಚ್ಚಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶವು ಈಗ ಯುಎಸ್ ನಂತರ ಎರಡನೇ ಅತಿದೊಡ್ಡ ರಸ್ತೆ ಜಾಲವನ್ನು ಹೊಂದಿದೆ ಎಂದು ನಿತಿನ್ ಗಡ್ಕರಿ ತಿಳಿಸಿದರು.
Advertisement