ಉಗ್ರರ ವಿರುದ್ಧ ಕೊನೆಯವರೆಗೂ ಹೋರಾಡಿ ಯೋಧ ಹುತಾತ್ಮ: ಮೂರು ತಲೆಮಾರುಗಳಿಂದಲೂ ಭಾರತೀಯ ಸೇನೆಯಲ್ಲಿ ಸೇವೆ!

ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಬುಧವಾರ ಭಾರತೀಯ ಸೇನೆಯ ಮೂವರು ಹಿರಿಯ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇದರಲ್ಲಿ ಕರ್ನಲ್​​ ಮನ್​ಪ್ರೀತ್​ ಸಿಂಗ್​ ಕೂಡ ಒಬ್ಬರಾಗಿದ್ದಾರೆ,
ಹುತಾತ್ಮ ಯೋಧ ಮನ್ ಪ್ರೀತ್ ಸಿಂಗ್
ಹುತಾತ್ಮ ಯೋಧ ಮನ್ ಪ್ರೀತ್ ಸಿಂಗ್
Updated on

ಚಂಡೀಗಡ: ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಬುಧವಾರ ಭಾರತೀಯ ಸೇನೆಯ ಮೂವರು ಹಿರಿಯ ಅಧಿಕಾರಿಗಳು ಹುತಾತ್ಮರಾಗಿದ್ದಾರೆ. ಇದರಲ್ಲಿ ಕರ್ನಲ್​​ ಮನ್​ಪ್ರೀತ್​ ಸಿಂಗ್​ ಕೂಡ ಒಬ್ಬರಾಗಿದ್ದಾರೆ.

ಉಗ್ರರ ಗುಂಡಿನ ದಾಳಿಗೆ ಬಲಿಯಾದ ಕರ್ನಲ್ ನಿವೃತ್ತಿಗೆ ಕೇವಲ ನಾಲ್ಕು ತಿಂಗಳ ಮಾತ್ರ ಬಾಕಿ ಇತ್ತು. ಹರಿಯಾಣ ಮೂಲದ ಕರ್ನಲ್​ ಮನ್​ಪ್ರೀತ್​ ಅವರ ಕುಟುಂಬವು ಮೂರು ತಲೆಮಾರುಗಳಿಂದಲೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದೆ. ಇವರ ನಿಧನದಿಂದ ಹುಟ್ಟೂರು ಶೋಕ ಸಾಗರದಲ್ಲಿ ಮುಳುಗಿದೆ.

19ನೇ ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್​ ಆಗಿದ್ದ ಮನ್‌ಪ್ರೀತ್ ಸಿಂಗ್ ಅನಂತನಾಗ್‌ನಲ್ಲಿ ಉಂಟಾದ ಭಯೋತ್ಪಾದಕರೊಂದಿಗಿನ ಭೀಕರ ಎನ್‌ಕೌಂಟರ್‌ನಲ್ಲಿ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಇವರ ಸಾವಿನ ಸುದ್ದಿಯು ಅವರ ಹುಟ್ಟೂರಾದ ಹರಿಯಾಣದ ಪಂಚಕುಲ ಮತ್ತು ಸಮೀಪದ ಪಂಜಾಬ್‌ನ ಮೊಹಾಲಿಯ ಮೂಲ ಗ್ರಾಮದಲ್ಲಿ ದುಃಖದ ಛಾಯೆ ಆವರಿಸಿದೆ. ಹುತಾತ್ಮ ವೀರ ಯೋಧನ ಪಾರ್ಥಿವ ಶರೀರವನ್ನು ಮೊಹಾಲಿ ಜಿಲ್ಲೆಯ ಭಂಜೋರಿಯಾ ಎಂಬ ಅವರ ಪೂರ್ವಜರ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗುತ್ತದೆ.

ಕರ್ನಲ್ ಮನ್‌ಪ್ರೀತ್​ ಸಿಂಗ್ ಕುಟುಂಬವು ದೇಶ ಸೇವೆಯ ಪರಂಪರೆಯನ್ನೇ ಹೊಂದಿದೆ. ಇವರು ಸಿಂಗ್ ಕುಟುಂಬದ ಹೆಮ್ಮೆಯ ಕುಡಿಯಾಗಿದ್ದರು. ತಮ್ಮ ಅಜ್ಜ ಶೀತಲ್ ಸಿಂಗ್, ತಂದೆ ದಿವಂಗತ ಲಖ್ಮೀರ್ ಸಿಂಗ್ ಹಾಗೂ ಚಿಕ್ಕಪ್ಪ ರಂಜಿತ್ ಸಿಂಗ್​ ಅವರ ಹಾದಿಯಲ್ಲೇ ಮನ್​ಪ್ರೀತ್ ಕೂಡ ಆಗಿದ್ದರು. ಇವರೆಲ್ಲರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಸೇನೆಯಿಂದ ನಿವೃತ್ತರಾದ ನಂತರ ಮನ್‌ಪ್ರೀತ್ ಸಿಂಗ್ ಅವರ ತಂದೆ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಮೂಲಕ ವಿವಿ ಭದ್ರತೆಗೆ ತಮ್ಮ ಬದ್ಧತೆ ಮುಂದುವರೆಸಿದ್ದರು. ಮತ್ತೊಂದೆಡೆ, ಪುತ್ರ ಮನ್‌ಪ್ರೀತ್​ ತಂದೆ ಮರಣದ ಸಮಯದಲ್ಲಿ ಭಾರತೀಯ ಸೇನೆಯಲ್ಲಿ ಸಕ್ರಿಯವಾಗಿ ದೇಶ ಸೇವೆಯಲ್ಲಿ ತೊಡಗಿದ್ದರು. ಈ ಮೂಲಕ ರಾಷ್ಟ್ರಕ್ಕೆ ತಮ್ಮ ಕುಟುಂಬದ ನಿಸ್ವಾರ್ಥ ಸಮರ್ಪಣೆಯ ಪರಂಪರೆಯನ್ನು ಮುಂದುವರೆಸಿದ್ದರು.

ಇತ್ತೀಚೆಗೆ ಅವರಿಗೆ ಸೇನೆಯಿಂದ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರ ತಂದೆ ಮತ್ತು ಅವರ ಇಬ್ಬರು ಸೋದರಸಂಬಂಧಿಗಳೂ ಸಹ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರು ಪತ್ನಿ ಜಗ್‌ಮೀತ್ ಮತ್ತು ಇಬ್ಬರು ಮಕ್ಕಳು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಹುತಾತ್ಮರಾದ ಸುದ್ದಿ ತಿಳಿದು ಇಡೀ ಕುಟುಂಬವು ದುಃಖದಲ್ಲಿ ಮುಳುಗಿದೆ.

ಆರಂಭದಲ್ಲಿ ಮನ್​ಪೀತ್​ ಸಿಂಗ್​ ಅವರ ನಿಧನ ಸುದ್ದಿಯನ್ನು ಪತ್ನಿ ಮತ್ತು ಮಕ್ಕಳು ಕುಗ್ಗಿ ಹೋಗುತ್ತಾರೆ ಎಂಬ ಕಾರಣಕ್ಕೆ ತಿಳಿಸಿರಲಿಲ್ಲ. ಬದಲಿಗೆ ಗಾಯಗಳಾಗಿವೆ ಎಂದು ತಿಳಿಸಲಾಯಿತು. ರಾಷ್ಟ್ರೀಯ ರೈಫಲ್ಸ್‌ನಿಂದ ನಾಲ್ಕು ತಿಂಗಳಲ್ಲಿ ನಿವೃತ್ತಿ ಹೊಂದಿ ಮನೆಗೆ ಹೋಗಬೇಕಿದ್ದ ಮನ್​ಪ್ರೀತ್​ ರಾಷ್ಟ್ರ ಸೇವೆಯಲ್ಲಿ ವೀರೋಚಿತ ಅಂತ್ಯವನ್ನು ಕಂಡಿದ್ದಾರೆ.

ಮೇಜರ್ ಆಶಿಶ್ ಧೋಂಚಕ್

ಜಮ್ಮು ಹಾಗೂ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ ನಲ್ಲಿ ಶುಕ್ರವಾರ ಮತ್ತೊಬ್ಬ ಯೋಧ ಮೇಜರ್ ಆಶಿಶ್ ಧೋಂಚಕ್ ಗಾಯಗೊಂಡು ಸಾವನ್ನಪ್ಪಿದ್ದಾರೆ. ಮೇಜರ್ ಆಶಿಶ್ ಧೋಂಚಕ್ ಹರಿಯಾಣದ ಪಾಣಿಪತ್‌ ಮೂಲದವರು. ಬುಧವಾರ ಅನಂತ್ ನಾಗ್ ಜಿಲ್ಲೆಯ ಕೋಕರ್ ನಾಗ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಭಯೋತ್ಪಾದಕರ ನಡುವೆ ನಡೆದ ಗುಂಡಿನ ಚಕಮಕಿಯ ನಂತರ ಈ ಎನ್ ಕೌಂಟರ್ ನಡೆದಿದೆ.

ಧೋಂಚಕ್ ಎರಡು ವರ್ಷದ ಮಗಳು, ಪತ್ನಿ ಮತ್ತು ಮೂವರು ಸಹೋದರಿಯರನ್ನು ಅಗಲಿದ್ದಾರೆ. ಮುಂದಿನ ತಿಂಗಳು ಅವರ ಹುಟ್ಟುಹಬ್ಬದಂದು ಅವರು ಕುಟುಂಬವನ್ನು ಭೇಟಿ ಮಾಡಲು ಯೋಜಿಸಿದ್ದರು. ಧೋಂಚಕ್ 2013 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಗೊಂಡರು ಮತ್ತು ಮೂವರು ಸಹೋದರಿಯರ ಏಕೈಕ ಸಹೋದರರಾಗಿದ್ದರು.

ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮತ್ತು ನೆರೆಹೊರೆಯವರು ಪಾಣಿಪತ್‌ನ ಸೆಕ್ಟರ್ 7 ನಲ್ಲಿರುವ ಅವರ ಮನೆಗೆ ಧಾವಿಸಿದರು.  ನಮಗೆ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದಿತ್ತು. ಆದರೆ ಸೇನೆಯಲ್ಲಿರುವ ನನ್ನ ಮಗನಿಂದ ಆತನ ಸಾವಿನ ಸುದ್ದಿ ನಮಗೆ ತಿಳಿಯಿತು ಎಂದು ಅವರ ಚಿಕ್ಕಪ್ಪ ದಿಲ್ವಾರ್ ಸಿಂಗ್ ಹೇಳಿದರು ಸಿಂಗ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com