ದಾಂತೇವಾಡ(ಛತ್ತೀಸ್‌ಗಢ): ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಮಹಿಳಾ ನಕ್ಸಲೀಯರು ಹತರಾಗಿದ್ದಾರೆ.
ರಾಜ್ಯ ಪೊಲೀಸ್ ಘಟಕದ ಜಿಲ್ಲಾ ಮೀಸಲು ಗಾರ್ಡ್(ಡಿಆರ್‌ಜಿ) ತಂಡವು ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಅರನ್‌ಪುರ ಪೊಲೀಸ್ ಠಾಣೆಯ ಅರಣ್ಯ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಗುಂಡಿನ ದಾಳಿ ನಡೆದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಂತೇವಾಡ-ಸುಕ್ಮಾ ಅಂತರಜಿಲ್ಲಾ ಗಡಿಯಲ್ಲಿರುವ ನಗರಂ-ಪೊರೊ ಹಿರ್ಮಾ ಅರಣ್ಯದ ಬಳಿ ನಿಷೇಧಿತ ಸಂಘಟನೆಯ ದರ್ಭಾ ವಿಭಾಗದ ನಕ್ಸಲೀಯರು ಇರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಗಸ್ತು ತಂಡವು ಪ್ರದೇಶವನ್ನು ಸುತ್ತುವರೆದಿರುವಾಗ, ಎರಡೂ ಕಡೆಯವರ ನಡುವೆ ಗುಂಡಿನ ಚಕಮಕಿ ಪ್ರಾರಂಭವಾಯಿತು.
ಗುಂಡಿನ ದಾಳಿ ನಿಂತ ನಂತರ ಇಬ್ಬರು ಮಹಿಳಾ ನಕ್ಸಲೀಯರ ಮೃತದೇಹಗಳು ಹಾಗೂ ಒಂದು INSAS ರೈಫಲ್ ಮತ್ತು 12 ಬೋರ್ ರೈಫಲ್ ಅನ್ನು ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.
Advertisement