ಮಾಜಿ ಪ್ರಧಾನಿ ಡಾ ಮನಮೋಹನ್ ಸಿಂಗ್ 91ನೇ ಹುಟ್ಟುಹಬ್ಬ: ಪಿಎಂ ಮೋದಿ ಸೇರಿ ಗಣ್ಯರಿಂದ ಶುಭಾಶಯ

ಇಂದು ಸೆಪ್ಟೆಂಬರ್ 26, ದೇಶದ ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ 91ನೇ ಜನ್ಮದಿನ. ದೇಶದ ಪ್ರಧಾನಿಗಳಾಗಿ, ಆರ್ಥಿಕ ತಜ್ಞರಾಗಿ ದೇಶವನ್ನು ಸಮರ್ಥವಾಗಿ ಮುನ್ನೆಡೆಸಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.
ಡಾ ಮನಮೋಹನ್ ಸಿಂಗ್
ಡಾ ಮನಮೋಹನ್ ಸಿಂಗ್

ನವದೆಹಲಿ: ಇಂದು ಸೆಪ್ಟೆಂಬರ್ 26, ದೇಶದ ಶ್ರೇಷ್ಠ ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ 91ನೇ ಜನ್ಮದಿನ. ದೇಶದ ಪ್ರಧಾನಿಗಳಾಗಿ, ಆರ್ಥಿಕ ತಜ್ಞರಾಗಿ ದೇಶವನ್ನು ಸಮರ್ಥವಾಗಿ ಮುನ್ನೆಡೆಸಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ.

ಮನಮೋಹನ್ ಸಿಂಗ್ ಅವರು 1982-1985 ರವರೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಸೇವೆ ಸಲ್ಲಿಸಿದರು. ಪಿವಿ ನರಸಿಂಹ ರಾವ್ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದವರು. 1991 ರಲ್ಲಿ ಭಾರತದ ಆರ್ಥಿಕ ಉದಾರೀಕರಣಕ್ಕೆ ಕಾರಣರಾದವರಲ್ಲಿ ಒಬ್ಬರು. 

ಇಂಗ್ಲಿಷಿನಲ್ಲಿ ಸಂಕ್ಷಿಪ್ತವಾಗಿ MMS ಎಂದು ಕರೆಯಲ್ಪಡುವ ಅವರು ಭಾರತವನ್ನು ಉದಾರೀಕರಣದತ್ತ ಕೊಂಡೊಯ್ಯುವ ಆರ್ಥಿಕ ಸುಧಾರಣೆಗಳನ್ನು ಪರಿಚಯಿಸಿದರು ಮತ್ತು ‘ಪರವಾನಗಿ ರಾಜ್’ ನ್ನು ಕೊನೆಗೊಳಿಸಿದರು. 

ಅವರು ಲೋಕಸಭೆಯ ಸದಸ್ಯರಲ್ಲದಿದ್ದರೂ, ರಾಜ್ಯಸಭೆಯ ಸದಸ್ಯರಾಗಿದ್ದರು. ಅವರು 1991 ರಿಂದ 2019 ರವರೆಗೆ ರಾಜ್ಯಸಭೆಯಲ್ಲಿ ಅಸ್ಸಾಂ ನ್ನು ಪ್ರತಿನಿಧಿಸಿದ್ದಾರೆ. 2019 ರಿಂದ ರಾಜಸ್ಥಾನವನ್ನು ಪ್ರತಿನಿಧಿಸುತ್ತಿದ್ದಾರೆ. ಇತ್ತೀಚೆಗೆ ಅವರು ದೆಹಲಿ ಸೇವೆಗಳ ಮಸೂದೆಯ ಮೇಲಿನ ಚರ್ಚೆಯನ್ನು ವೀಕ್ಷಿಸಲು ಗಾಲಿಕುರ್ಚಿಯಲ್ಲಿ ರಾಜ್ಯಸಭೆಯ ಕಲಾಪಕ್ಕೆ ಹಾಜರಾಗುವ ಮೂಲಕ ಸುದ್ದಿಯಾದರು. 

2004 ಮತ್ತು 2009 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಿದ ನಂತರ ಡಾ. ಮನಮೋಹನ್ ಸಿಂಗ್ ಅವರು 2004 ರಿಂದ 2014 ರವರೆಗೆ ಸತತ ಎರಡು ಅವಧಿಗೆ ಭಾರತದ 13 ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು.

ಅವರು ಬ್ರಿಟಿಷ್ ಇಂಡಿಯಾದ ಪಂಜಾಬ್ ಪ್ರಾಂತ್ಯದ ಭಾಗವಾಗಿದ್ದ ಗಾಹ್ ಎಂಬ ಹಳ್ಳಿಯಲ್ಲಿ 1932ರಲ್ಲಿ ಜನಿಸಿದರು. 1947 ರ ವಿಭಜನೆಯ ನಂತರ, ಗಾಹ್ ಪಾಕಿಸ್ತಾನದ ಭಾಗವಾಯಿತು.

ತಮ್ಮ ರಾಜಕೀಯ ವೃತ್ತಿಜೀವನದ ಆಚೆಗೆ, ಮನಮೋಹನ್ ಸಿಂಗ್ ಅವರು ಅರ್ಥಶಾಸ್ತ್ರಜ್ಞ ಮತ್ತು ಶಿಕ್ಷಣತಜ್ಞರಾಗಿ ಉತ್ತಮ ಸಾಧನೆ ಮಾಡಿದರು. ಅವರು 1952 ಮತ್ತು 1954 ರಲ್ಲಿ ಪಂಜಾಬ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ತಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಪಡೆದರು.

ಚಿಕ್ಕವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡು ತಂದೆಯ ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಸಿಂಗ್ ಅವರು ಬಲವಾದ ಶೈಕ್ಷಣಿಕ ಹಿನ್ನೆಲೆ ಹೊಂದಿದ್ದರು. ಅವರ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ನಂತರ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದ ಟ್ರಿಪೋಸ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಡಿ ಫಿಲ್ ನ್ನು ಪಡೆದರು. 

ಕೇಂಬ್ರಿಡ್ಜ್‌ನಿಂದ ಭಾರತಕ್ಕೆ ಮರಳಿದ ನಂತರ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಮನಮೋಹನ್ ಸಿಂಗ್ ಅವರ ಆರ್ಥಿಕ ಪ್ರತಿಭೆಯನ್ನು ಗುರುತಿಸಿದ ಲಲಿತ್ ನಾರಾಯಣ ಮಿಶ್ರಾ ಅವರು ನೇಮಿಸಿದ ವಿದೇಶಿ ವ್ಯಾಪಾರ ಸಚಿವಾಲಯದ ಸಲಹೆಗಾರರಾಗಿಯೂ ಕೆಲಸ ಮಾಡಿದರು.

ತಮ್ಮ ವೃತ್ತಿಜೀವನದುದ್ದಕ್ಕೂ, ಸಿಂಗ್ ಅವರು ಮುಖ್ಯ ಆರ್ಥಿಕ ಸಲಹೆಗಾರ (1972-76), RBI ಗವರ್ನರ್ (1982-85), ಮತ್ತು ಯೋಜನಾ ಆಯೋಗದ ಮುಖ್ಯಸ್ಥ (1985-87) ಸೇರಿದಂತೆ ಭಾರತ ಸರ್ಕಾರದಲ್ಲಿ ವಿವಿಧ ಮಹತ್ವದ ಸ್ಥಾನಗಳನ್ನು ಹೊಂದಿದ್ದರು.
1991 ರಲ್ಲಿ ಅವರು ಪ್ರಧಾನ ಮಂತ್ರಿ ಪಿವಿ ನರಸಿಂಹ ರಾವ್ ಅವರ ಸಂಪುಟದಲ್ಲಿ ಹಣಕಾಸು ಸಚಿವರಾಗಿ ನೇಮಕಗೊಂಡಾಗ ಅವರ ವೃತ್ತಿಜೀವನದ ಪ್ರಗತಿಯಾಯಿತು.

ಹಣಕಾಸು ಮಂತ್ರಿಯಾಗಿ, ಸಿಂಗ್ ಭಾರತದ ಆರ್ಥಿಕತೆಯನ್ನು ಜಗತ್ತಿಗೆ ತೆರೆಯುವ "LPG - ಉದಾರೀಕರಣ, ಖಾಸಗೀಕರಣ ಮತ್ತು ಜಾಗತೀಕರಣ" ಸೇರಿದಂತೆ ಮಹತ್ವದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರು.

ಕುತೂಹಲಕಾರಿಯಾಗಿ, ಡಾ. ಮನಮೋಹನ್ ಸಿಂಗ್ ಅವರು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ 1998 ರಿಂದ 2004 ರವರೆಗೆ ಮೇಲ್ಮನೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಸೇವೆ ಸಲ್ಲಿಸಿದ್ದರೂ, ಅವರು 1999 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿದ್ದರಾದರೂ ಗೆಲ್ಲಲಿಲ್ಲ. ಅವರು ತಮ್ಮ ವೃತ್ತಿಜೀವನದ ಉದ್ದಕ್ಕೂ ಹಲವಾರು ಪುರಸ್ಕಾರಗಳನ್ನು ಪಡೆದಿದ್ದಾರೆ, ಇದರಲ್ಲಿ ವರ್ಷದ ಹಣಕಾಸು ಮಂತ್ರಿ, ಅತ್ಯುತ್ತಮ ಸಂಸದೀಯ ಪ್ರಶಸ್ತಿ ಮತ್ತು ವಿಶ್ವದ ಅಗ್ರ 100 ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರೆಂದು ಗುರುತಿಸಲಾಗಿದೆ.

ಪ್ರಧಾನಿ ಮೋದಿ ಶುಭಾಶಯ: ಮನಮೋಹನ್ ಸಿಂಗ್ ಅವರ 91 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದಾರೆ. 

ಟ್ವಿಟ್ಟರ್ ನಲ್ಲಿ ಶುಭಕೋರಿರುವ ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಜನ್ಮದಿನದ ಶುಭಾಶಯಗಳು. ಅವರ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com