ಹೊಸ ಅಪಾಯಗಳನ್ನು ಎದುರಿಸಲು ಸಿದ್ಧರಾಗಿ: ಕುತೂಹಲ ಮೂಡಿಸಿತು ಸೇನಾಪಡೆಗಳಿಗೆ ಮೋದಿ ನೀಡಿದ ಸೂಚನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶನಿವಾರದಂದು ಭಾರತದ ಭದ್ರತಾ ಸವಾಲುಗಳು, ಕಾರ್ಯಾಚರಣೆ ಸನ್ನದ್ಧತೆ ಬಗ್ಗೆ ಪರಿಶೀಲನೆ ನಡೆಸಿದ್ದು, ಯಾವುದೇ ರೀತಿಯ ಹೊಸ ಅಪಾಯಗಳನ್ನು ಎದುರಿಸಲು ಸಿದ್ಧರಾಗಿ ಎಂದು 3 ಪಡೆಗಳಿಗೆ ಕರೆ ನೀಡಿದ್ದಾರೆ.
ರಕ್ಷಣಾ ಸಚಿವಾಲಯ ಈ ಬಗ್ಗೆ ಹೇಳಿಕೆ ನೀಡಿದ್ದು, ಅಗತ್ಯವಿರುವ ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನಗಳೊಂದಿಗೆ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮೋದಿ ಹೇಳಿದ್ದಾರೆಂದು ರಕ್ಷಣಾ ಇಲಾಖೆ ತಿಳಿಸಿದೆ.
ವಾರ್ಷಿಕ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನದಲ್ಲಿ ಚೀನಾದೊಂದಿಗಿನ ಗಡಿ ಮತ್ತು ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುವ ಮಾರ್ಗಗಳು, ಭದ್ರತಾ ಸವಾಲುಗಳು ಚರ್ಚೆಯಾದ ಪ್ರಮುಖ ವಿಷಯಗಳಾಗಿವೆ ಎಂದು ತಿಳಿದುಬಂದಿದೆ.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರಿಗೆ ಕೋವಿಡ್ -19 ದೃಢಪಟ್ಟಿರುವುದರಿಂದ ಸಮಾರೋಪ ಸಮಾರಂಭಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ, ಅಡ್ಮಿರಲ್ ಹರಿಕುಮಾರ್ ರೋಗಲಕ್ಷಣ ರಹಿತ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.
ಸಿಡಿಎಸ್ ಜನರಲ್ ಅನಿಲ್ ಚೌಹ್ಹಾಣ್ ಪ್ರಧಾನಿ ಮೋದಿ ಅವರಿಗೆ ಈ ವರ್ಷದ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನದಲ್ಲಿ ಚರ್ಚಿಸಲಾದ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
"ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 1 ರಂದು ಭೋಪಾಲ್‌ನಲ್ಲಿ ನಡೆದ ಸಂಯೋಜಿತ ಕಮಾಂಡರ್‌ಗಳ ಸಮ್ಮೇಳನ 2023 ರ ಸಮಾರೋಪ ಸಮಾರಂಭದಲ್ಲಿ ಸಶಸ್ತ್ರ ಪಡೆಗಳ ಭದ್ರತಾ ಪರಿಸ್ಥಿತಿ ಮತ್ತು ಕಾರ್ಯಾಚರಣೆಯ ಸಿದ್ಧತೆಯನ್ನು ಪರಿಶೀಲಿಸಿದರು" ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ