ಭಾರತೀಯರನ್ನು ಪರಸ್ಪರ ವಿಭಜಿಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳುವವರೇ ನಿಜವಾದ ದೇಶವಿರೋಧಿಗಳು: ಸೋನಿಯಾ ಗಾಂಧಿ

ಅಧಿಕಾರದಲ್ಲಿರುವ ಸರ್ಕಾರವು ಸಂವಿಧಾನದ ಸಂಸ್ಥೆಗಳನ್ನು "ದುರುಪಯೋಗಪಡಿಸಿಕೊಳ್ಳಲು ಮತ್ತು ಬುಡಮೇಲು ಮಾಡಲು ನೋಡುತ್ತಿವೆ", ಈ "ವ್ಯವಸ್ಥಿತ ಆಕ್ರಮಣ" ದಿಂದ ಸಂವಿಧಾನವನ್ನು ರಕ್ಷಿಸಲು ದೇಶದ ಜನರು ಮುಂದಾಗಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸೋನಿಯಾ ಗಾಂಧಿ
ಸೋನಿಯಾ ಗಾಂಧಿ

ನವದೆಹಲಿ: ಅಧಿಕಾರದಲ್ಲಿರುವ ಸರ್ಕಾರವು ಸಂವಿಧಾನದ ಸಂಸ್ಥೆಗಳನ್ನು "ದುರುಪಯೋಗಪಡಿಸಿಕೊಳ್ಳಲು ಮತ್ತು ಬುಡಮೇಲು ಮಾಡಲು ನೋಡುತ್ತಿವೆ", ಈ "ವ್ಯವಸ್ಥಿತ ಆಕ್ರಮಣ" ದಿಂದ ಸಂವಿಧಾನವನ್ನು ರಕ್ಷಿಸಲು ದೇಶದ ಜನರು ಮುಂದಾಗಬೇಕು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು ಡಾ ಬಿ ಆರ್ ಅಂಬೇಡ್ಕರ್ ಅವರ 132ನೇ ಜನ್ಮಜಯಂತಿ ಅಂಗವಾಗಿ ದ ಟೆಲಿಗ್ರಾಫ್ ಪತ್ರಿಕೆಗೆ ಬರೆದ ಲೇಖನದಲ್ಲಿ ಸೋನಿಯಾ ಗಾಂಧಿಯವರು, ಧರ್ಮ, ಭಾಷೆ, ಜಾತಿ ಮತ್ತು ಲಿಂಗದ ಆಧಾರದ ಮೇಲೆ ಭಾರತೀಯರನ್ನು ಪರಸ್ಪರ ವಿಭಜಿಸಲು ತಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುವವರು ನಿಜವಾದ "ದೇಶವಿರೋಧಿಗಳು" ಎಂದು ಬಣ್ಣಿಸಿದ್ದಾರೆ.

ನಾವು ಇಂದು ಬಾಬಾಸಾಹೇಬರ ಪರಂಪರೆಯನ್ನು ಗೌರವಿಸುತ್ತಿರುವಾಗ, ಸಂವಿಧಾನದ ಯಶಸ್ಸು ಆಡಳಿತದ ಕರ್ತವ್ಯವನ್ನು ವಹಿಸಿದ ಜನರ ನಡವಳಿಕೆಯನ್ನು ಅವಲಂಬಿಸಿರುತ್ತದೆ ಎಂಬ ಅಂಬೇಡ್ಕರ್ ಅವರ ಪೂರ್ವಭಾವಿ ಎಚ್ಚರಿಕೆಯನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಕೂಡ ಹೇಳಿದ್ದಾರೆ.

ಇಂದು ಅಧಿಕಾರದಲ್ಲಿರುವವರು ಸಂವಿಧಾನವನ್ನು ದುರುಪಯೋಗಪಡಿಸಿಕೊಳ್ಳುವ ಮತ್ತು ಸಂವಿಧಾನದ ನೀತಿ, ತತ್ವಗಳನ್ನೇ ಬುಡಮೇಲು ಮಾಡಲು ನೋಡುತ್ತಿದ್ದಾರೆ ಮತ್ತು ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಮತ್ತು ನ್ಯಾಯವೆಂಬ ಅಡಿಪಾಯವನ್ನು ದುರ್ಬಲಗೊಳಿಸಲು ನೋಡುತ್ತಿದ್ದಾರೆ ಎಂದರು.

ದೇಶದ ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಬದಲು ಕಿರುಕುಳ ನೀಡಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸ್ವಾತಂತ್ರ್ಯಕ್ಕೆ ಬೆದರಿಕೆಯಿದೆ ಎಂದು ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಇಂದು ಬಹುಪಾಲು ಭಾರತೀಯರು ಆರ್ಥಿಕವಾಗಿ ಬಳಲುತ್ತಿರುವಾಗಲೂ ಪ್ರತಿ ಕ್ಷೇತ್ರದಲ್ಲೂ ಅಧಿಕಾರದಲ್ಲಿರುವವರು ತಮ್ಮ ಆಯ್ಕೆಯ ಸ್ನೇಹಿತರಿಗೆ ಮಾತ್ರ ಒಲವು ತೋರಿಸುತ್ತಿರುವುದನ್ನು ಕಾಣಬಹುದು ಎಂದರು.

ಉದ್ದೇಶಪೂರ್ವಕವಾಗಿ ದ್ವೇಷದ ವಾತಾವರಣವನ್ನು ನಿರ್ಮಿಸುವ ಮೂಲಕ ಮತ್ತು ಪರಸ್ಪರರ ವಿರುದ್ಧ ಭಾರತೀಯರನ್ನು ಧ್ರುವೀಕರಿಸುವ ಮೂಲಕ ಭ್ರಾತೃತ್ವವು ನಾಶವಾಗುತ್ತಿದೆ. ನಿರಂತರ ಅಭಿಯಾನದ ಮೂಲಕ ನ್ಯಾಯಾಂಗದ ಮೇಲೆ ಒತ್ತಡ ಹೇರುವ ಮೂಲಕ ಅನ್ಯಾಯಗಳು ಹೆಚ್ಚಾಗುತ್ತಿವೆ ಎಂದಿದ್ದಾರೆ. ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಈ ವ್ಯವಸ್ಥಿತ ಆಕ್ರಮಣದಿಂದ ಸಂವಿಧಾನವನ್ನು ರಕ್ಷಿಸಲು ಜನರು ಕಾರ್ಯನಿರ್ವಹಿಸಬೇಕು ಎಂದು ಸೋನಿಯಾ ಗಾಂಧಿ ಕರೆ ನೀಡಿದ್ದಾರೆ. 

ಎಲ್ಲ ಭಾರತೀಯರು ಅವರು ಎಲ್ಲೇ ನಿಂತರೂ ರಾಜಕೀಯ ಪಕ್ಷಗಳು, ಸಂಘಗಳು,ಒಕ್ಕೂಟಗಳು, ನಾಗರಿಕರ ಗುಂಪುಗಳಲ್ಲಿ ಮತ್ತು ವ್ಯಕ್ತಿಗಳಾಗಿ -- ಈ ನಿರ್ಣಾಯಕ ಸಮಯದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಬೇಕು. ಡಾ. ಅಂಬೇಡ್ಕರ್ ಅವರ ಜೀವನ ಮತ್ತು ಹೋರಾಟವು ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುವ ನಿರ್ಣಾಯಕ ಪಾಠಗಳನ್ನು ಕಲಿಸುತ್ತದೆ ಎಂದು ಕಾಂಗ್ರೆಸ್ ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com