ನವೀಕೃತ ಜಾತಿ ಗಣತಿ ಬಿಡುಗಡೆ ಮಾಡಿ, ಸಾಮಾಜಿಕ ನ್ಯಾಯ-ಸಬಲೀಕರಣಕ್ಕೆ ಅಗತ್ಯವಿದೆ: ಪ್ರಧಾನಿಗೆ ಪತ್ರ ಬರೆದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ನವೀಕೃತ ಜಾತಿ ಗಣತಿಗೆ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ-ಮಲ್ಲಿಕಾರ್ಜುನ ಖರ್ಗೆ(ಸಂಗ್ರಹ ಚಿತ್ರ)

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ನವೀಕೃತ ಜಾತಿ ಗಣತಿಗೆ ಒತ್ತಾಯಿಸಿದ್ದಾರೆ.

ಅವರು ತಮ್ಮ ಪತ್ರದಲ್ಲಿ, ಜಾತಿಗಣತಿ ನವೀಕರಿಸದಿದ್ದರೆ, ವಿಶೇಷವಾಗಿ ಒಬಿಸಿ ವರ್ಗಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕಾರ್ಯಕ್ರಮಗಳಿಗೆ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. 

ನವೀಕೃತ ಜಾತಿ ಗಣತಿಗಾಗಿ ಕಾಂಗ್ರೆಸ್ ವತಿಯಿಂದ ನಾನು ನಿಮ್ಮ ಮುಂದೆ ಬೇಡಿಕೆಯಿಡುತ್ತಿದ್ದೇನೆ. ನನ್ನ ಸಹೋದ್ಯೋಗಿಗಳು ಮತ್ತು ನಾನು ಈ ಹಿಂದೆ ಸಂಸತ್ತಿನ ಉಭಯ ಸದನಗಳಲ್ಲಿ ಹಲವು ಬಾರಿ ಈ ಬಗ್ಗೆ ಪ್ರಸ್ತಾಪಿಸಿದ್ದೆವು ಎಂದಿದ್ದಾರೆ.

ಮೊದಲ ಬಾರಿಗೆ, ಯುಪಿಎ ಸರ್ಕಾರವು 2011-12ರ ಅವಧಿಯಲ್ಲಿ ಸುಮಾರು 25 ಕೋಟಿ ಕುಟುಂಬಗಳನ್ನು ಒಳಗೊಂಡ ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿ (SECC) ನಡೆಸಿತ್ತು. ಆದಾಗ್ಯೂ, ಹಲವಾರು ಕಾರಣಗಳಿಗಾಗಿ, ಜಾತಿ ಗಣತಿಯನ್ನು ಪ್ರಕಟಿಸಲಾಗಲಿಲ್ಲ. 2014ರ ಮೇ ತಿಂಗಳಲ್ಲಿ ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಮತ್ತು ಇತರ ಸಂಸದರು ಬಿಡುಗಡೆಗೆ ಒತ್ತಾಯಿಸಿದರು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. 

ಈ ಬಗ್ಗೆ ಖರ್ಗೆಯವರು ನಿನ್ನೆ ಪ್ರಧಾನಿಗಳಿಗೆ ಪತ್ರ ಬರೆದಿದ್ದು, 2021 ರಲ್ಲಿ ನಿಯಮಿತ ದಶವಾರ್ಷಿಕ ಗಣತಿಯನ್ನು ಕೈಗೊಳ್ಳಬೇಕಾಗಿತ್ತು ಆದರೆ ಅದನ್ನು ಇನ್ನೂ ನಡೆಸಲಾಗಿಲ್ಲ ಎಂದು ಅವರು ಗಮನಸೆಳೆದಿದ್ದಾರೆ. ಇದನ್ನು ತಕ್ಷಣವೇ ಮಾಡಬೇಕು. ಸಮಗ್ರ ಜಾತಿ ಗಣತಿ ಅವಿಭಾಜ್ಯ ಅಂಗವಾಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಖರ್ಗೆ ಅವರು ಪ್ರಧಾನಿಗೆ ಬರೆದ ಪತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, "ಜಿತ್ನಿ ಆಬಾದಿ, ಉತ್ನಾ ಹಕ್! 2021 ರಲ್ಲಿ ನಡೆಸಬೇಕಿದ್ದ ದಶವಾರ್ಷಿಕ ಜನಗಣತಿಯನ್ನು ಈಗಿನಿಂದಲೇ ಮಾಡಬೇಕೆಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆಯವರು  ಪ್ರಧಾನಿಗೆ ಪತ್ರ ಬರೆದಿದ್ದಾರೆ. ಜಾತಿ ಗಣತಿಯನ್ನು ಅದರ ಅವಿಭಾಜ್ಯ ಅಂಗವನ್ನಾಗಿ ಮಾಡಬೇಕು. ಇದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣವನ್ನು ದೃಢವಾದ ತಳಹದಿಯಲ್ಲಿ ಇರಿಸುತ್ತದೆ ಎಂದಿದ್ದಾರೆ. 

ನಿನ್ನೆ ಕೋಲಾರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, 2011 ರ ಜಾತಿ ಆಧಾರಿತ ಜನಗಣತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಪಡಿಸಬೇಕು. ಮೀಸಲಾತಿ ಮೇಲಿನ ಶೇಕಡಾ 50 ರಷ್ಟು ಮಿತಿಯನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com