2024ರ ಹಾದಿ: ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಯತ್ನದಲ್ಲಿ ನಿತೀಶ್; ಶೀಘ್ರದಲ್ಲೇ ಪಟ್ನಾಯಕ್, ಕೆಸಿಆರ್ ಭೇಟಿ
ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಜನತಾದಳ(ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ...
Published: 26th April 2023 08:31 AM | Last Updated: 26th April 2023 06:32 PM | A+A A-

ನವೀನ್ ಪಟ್ನಾಯಕ್ - ನಿತೀಶ್ ಕುಮಾರ್ - ಕೆಸಿಆರ್
ನವದೆಹಲಿ: ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಜನತಾದಳ(ಯುನೈಟೆಡ್) ಮುಖ್ಯಸ್ಥ ನಿತೀಶ್ ಕುಮಾರ್ ಅವರು ಶೀಘ್ರದಲ್ಲೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಭೇಟಿಯಾಗಲಿದ್ದಾರೆ.
ನಿತೀಶ್ ಈಗಾಗಲೇ ಪಶ್ಚಿಮ ಬಂಗಾಳ ಸಿಎಂ ಮತ್ತು ತೃಣಮೂಲ ಕಾಂಗ್ರೆಸ್(ಟಿಎಂಸಿ) ಅಧ್ಯಕ್ಷೆ ಮಮತಾ ಬ್ಯಾನರ್ಜಿ ಅವರನ್ನು ಕೋಲ್ಕತ್ತಾದಲ್ಲಿ ಮತ್ತು ಸಮಾಜವಾದಿ ಪಕ್ಷದ(ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಅವರನ್ನು ಲಖನೌದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ನಿತೀಶ್ ಅವರ ಉಪ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಸಹ ಜೊತೆಗಿದ್ದರು.
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮೈತ್ರಿ ರಚಿಸಲು ಪ್ರತಿಪಕ್ಷಗಳನ್ನು ಒಗ್ಗೂಡಿಸುವ ತಮ್ಮ ಪ್ರಯತ್ನವನ್ನು ಮುಂದುವರಿಸಿರುವ ನಿತೀಶ್ ಕುಮಾರ್ ಅವರು, ಶೀಘ್ರದಲ್ಲೇ ಒಡಿಶಾ ಮತ್ತು ತೆಲಂಗಾಣ ಸಿಎಂಗಳನ್ನು ಭೇಟಿ ಮಾಡಲಿದ್ದಾರೆ ಎಂದು ಜೆಡಿ(ಯು) ಹಿರಿಯ ನಾಯಕರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಆದರೆ, ಭೇಟಿಯ ದಿನಾಂಕಗಳು ಇನ್ನೂ ನಿರ್ಧಾರವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಸಂದರ್ಶನ: ಕರ್ನಾಟಕ ಚುನಾವಣೆ ಕಾಂಗ್ರೆಸ್‌ಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಹತ್ವದ್ದಾಗಿದೆ- ಕೆ ಸಿ ವೇಣುಗೋಪಾಲ್
ಬಿಜೆಡಿ ಮುಖ್ಯಸ್ಥ ಪಟ್ನಾಯಕ್ ಅವರು 2008ರಲ್ಲಿ ಎನ್‌ಡಿಎಯಿಂದ ನಿರ್ಗಮಿಸಿದಾಗಿನಿಂದ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಳ್ಳುತ್ತಿರುವುದರಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ. ಆದಾಗ್ಯೂ, ಅವರು ಸಂಸತ್ತಿನಲ್ಲಿ ಹಲವಾರು ಪ್ರಮುಖ ಮಸೂದೆಗಳ ಅಂಗೀಕಾರದಲ್ಲಿ ಬಿಜೆಪಿ ಸರ್ಕಾರವನ್ನು ಬೆಂಬಲಿಸಿದ್ದಾರೆ.
ನಿತೀಶ್ ಮತ್ತು ಪಟ್ನಾಯಕ್ ಇಬ್ಬರೂ ಸಂಯುಕ್ತ ಜನತಾ ದಳದ ಭಾಗವಾಗಿರುವುದರಿಂದ ಸುದೀರ್ಘ ಸೌಹಾರ್ದತೆಯನ್ನು ಹೊಂದಿದ್ದಾರೆ ಎಂದು ಜೆಡಿಯು ನಾಯಕ ಹೇಳಿದ್ದಾರೆ.
1997ರಲ್ಲಿ ಜನತಾ ದಳದಿಂದ ಬೇರ್ಪಟ್ಟಿರುವ ನಾಯಕರೊಂದಿಗೆ ಬಿಜೆಡಿ ರಚನೆಯಾಯಿತು. "ನವೀನ್ ಪಟ್ನಾಯಕ್ ಅವರ ತಂದೆ ಬಿಜು ಪಟ್ನಾಯಕ್ ಅವರು ಲೋಕದಳ ಮತ್ತು ಜನತಾ ಪಕ್ಷದಲ್ಲಿ ನಮ್ಮ ನಾಯಕರಾಗಿದ್ದರು" ಎಂದು ಜೆಡಿ(ಯು) ನಾಯಕ ತಿಳಿಸಿದ್ದಾರೆ.