ಕೋಲ್ಕತ್ತಾ: ಕಳೆದ ತಿಂಗಳು ಪಶ್ಚಿಮ ಬಂಗಾಳದ ಹೌರಾ, ಹೂಗ್ಲಿ ಮತ್ತು ದಕ್ಷಿಣ ದಿನಾಜ್‌ಪುರ ಜಿಲ್ಲೆಗಳಲ್ಲಿ ರಾಮನವಮಿ ಆಚರಣೆ ವೇಳೆ ನಡೆದ ಹಿಂಸಾಚಾರದ ಬಗ್ಗೆ ತನಿಖೆ ನಡೆಸುವಂತೆ ಕಲ್ಕತ್ತಾ ಹೈಕೋರ್ಟ್ ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ಆದೇಶಿಸಿದೆ.
ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ, ಹಿಂಸಾಚಾರಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳು ಮತ್ತು ಇತರ ದಾಖಲೆಗಳನ್ನು ಎರಡು ವಾರಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಎನ್ಐಎ ತನಿಖೆ ಕೋರಿ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಮತ್ತು ಇತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ(ಪಿಐಎಲ್) ವಿಚಾರಣೆ ನಡೆಸಿದ ಹೈಕೋರ್ಟ್, ಹೌರಾದ ಶಿಬ್‌ಪುರ ಮತ್ತು ಹೂಗ್ಲಿ ಜಿಲ್ಲೆಯ ರಿಶ್ರಾದಲ್ಲಿ ನಡೆದ ಹಿಂಸಾಚಾರದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ವರ್ಗಾಯಿಸುವಂತೆ ಪಶ್ಚಿಮ ಬಂಗಾಳ ಪೊಲೀಸರಿಗೆ ಆದೇಶಿಸಿದೆ.
ಮಾರ್ಚ್ 30 ರಂದು ರಾಮನವಮಿ ಹಬ್ಬದ ಸಂದರ್ಭದಲ್ಲಿ ಹೌರಾದ ಶಿಬ್‌ಪುರ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ಈ ಸಂದರ್ಭದಲ್ಲಿ ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಯಿತು ಮತ್ತು ಅಂಗಡಿಗಳನ್ನು ಧ್ವಂಸಗೊಳಿಸಲಾಯಿತು.
ಹೈಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಈ ಮೂರು ಗಲಭೆಗಳು ಟಿಎಂಸಿ ಸರ್ಕಾರದ ಬೆಂಬಲದೊಂದಿಗೆ ಪೂರ್ವ ಯೋಜಿತ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಉದ್ರೇಕಕಾರಿ ಭಾಷಣದಿಂದ ಪ್ರಚೋದನೆ ಪಡೆದಿವೆ ಎಂದು ಟ್ವೀಟ್ ಮಾಡಿದ್ದಾರೆ.
Advertisement