'ಪ್ರಧಾನ ಮಂತ್ರಿಗಳಿಗೆ ಸದನಕ್ಕೆ ಬಂದು ಹೇಳಿಕೆ ನೀಡಿ ಎಂದು ಆದೇಶಿಸಲು ಸಾಧ್ಯವಿಲ್ಲ': ರಾಜ್ಯಸಭಾಧ್ಯಕ್ಷ ಜಗದೀಪ್ ಧಂಖರ್

ಮಣಿಪುರ ವಿಚಾರವಾಗಿ ನರೇಂದ್ರ ಮೋದಿಯವರು ಸದನದಲ್ಲಿ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷದ ನಾಯಕರು ತೀವ್ರ ಒತ್ತಡ ಹೇರುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನಕ್ಕೆ ಬರುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಹೇಳಿದ್ದಾರೆ. 
ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾಧ್ಯಕ್ಷ ಜಗದೀಪ್ ಧಂಖರ್(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ, ರಾಜ್ಯಸಭಾಧ್ಯಕ್ಷ ಜಗದೀಪ್ ಧಂಖರ್(ಸಂಗ್ರಹ ಚಿತ್ರ)

ನವದೆಹಲಿ: ಮಣಿಪುರ ವಿಚಾರವಾಗಿ ನರೇಂದ್ರ ಮೋದಿಯವರು ಸದನದಲ್ಲಿ ಹೇಳಿಕೆ ನೀಡಬೇಕೆಂದು ವಿರೋಧ ಪಕ್ಷದ ನಾಯಕರು ತೀವ್ರ ಒತ್ತಡ ಹೇರುತ್ತಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದನಕ್ಕೆ ಬರುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಹೇಳಿದ್ದಾರೆ. 

ರಾಜ್ಯಸಭೆಯ ನಿಯಮ 267 ರ ಅಡಿಯಲ್ಲಿ ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ಚರ್ಚೆ ನಡೆಸಬೇಕೆಂದು ಒತ್ತಾಯಿಸುತ್ತಿರುವ ಪ್ರತಿಪಕ್ಷ ನಾಯಕರು ನಂತರ ಸದನದಲ್ಲಿ ಪ್ರತಿಭಟನೆ ನಡೆಸಿ ಹೊರನಡೆದರು.  ಸದಸ್ಯರು ಸೂಚಿಸಿದ ಸಮಸ್ಯೆಯನ್ನು ಚರ್ಚಿಸಲು ಪಟ್ಟಿ ಮಾಡಲಾದ ವ್ಯವಹಾರವನ್ನು ದಿನಕ್ಕೆ ಅಮಾನತುಗೊಳಿಸಲು ನಿಯಮ 267 ಅನುಮತಿಸುತ್ತದೆ.

ಇದಕ್ಕೂ ಮೊದಲು, ಮಣಿಪುರದಲ್ಲಿನ ಅಶಾಂತಿಯ ಬಗ್ಗೆ ಚರ್ಚೆಗೆ ಒತ್ತಾಯಿಸಿ ನಿಯಮ 267 ರ ಅಡಿಯಲ್ಲಿ 58 ನೋಟಿಸ್‌ಗಳನ್ನು ಸ್ವೀಕರಿಸಲಾಗಿದೆ ಎಂದು ಧಂಖರ್ ಹೇಳಿದರು. ಆದರೆ ನಂತರ ನೋಟಿಸ್‌ಗಳು ಕ್ರಮಬದ್ಧವಾಗಿಲ್ಲ ಎಂದು ಹೇಳಿ ಸ್ವೀಕರಿಸಲಿಲ್ಲ.
ಪ್ರತಿಪಕ್ಷದ ಸದಸ್ಯರ ಘೋಷಣೆಗಳ ನಡುವೆ ಧಂಖರ್ ಅವರು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದರು.

ಮಣಿಪುರ ವಿಷಯದ ಕುರಿತ ಚರ್ಚೆಯನ್ನು ನಿಯಮ 267ರ ಅಡಿಯಲ್ಲಿ ಏಕೆ ನಡೆಸಬೇಕು, ಸದನದಲ್ಲಿ ಪ್ರಧಾನಿ ಹೇಳಿಕೆ ನೀಡಬೇಕು ಎಂಬುದನ್ನು ಒತ್ತಿಹೇಳುವ ಎಂಟು ಅಂಶಗಳನ್ನು ವಿರೋಧ ಪಕ್ಷ ನಾಯಕರು ತಮ್ಮ ನೋಟಿಸ್‌ನಲ್ಲಿ ನೀಡಿದ್ದಾರೆ ಎಂದು ಖರ್ಗೆ ಹೇಳಿದರು. ಹಿಂಸಾಚಾರದಲ್ಲಿ ಮೃತಪಟ್ಟವರು ಮತ್ತು ಗಾಯಗೊಂಡವರ ಸಂಖ್ಯೆಯನ್ನು ಅವರು ಉಲ್ಲೇಖಿಸಿದ್ದಾರೆ.

ಸದನದಲ್ಲಿ ಪ್ರಧಾನಿಯವರ ಉಪಸ್ಥಿತಿಗೆ ಒತ್ತಾಯಿಸಿ ಪ್ರತಿಪಕ್ಷಗಳ ಸದಸ್ಯರು ಮತ್ತೊಂದು ಸುತ್ತಿನ ಪ್ರತಿಭಟನೆ ನಡೆಸಿದರು. ಆಗ ಸಭಾಪತಿಗಳು, ಪ್ರಧಾನಿಯವರ ಉಪಸ್ಥಿತಿಗಾಗಿ ನಾನು ನಿರ್ದೇಶನವನ್ನು ನೀಡಿದರೆ ಈ ಪೀಠದಿಂದ ನಾನು ನನ್ನ ಪ್ರಮಾಣ ವಚನವನ್ನು ಉಲ್ಲಂಘಿಸಿದಂತಾಗುತ್ತದೆ. ಸಾಂವಿಧಾನಿಕ ಕ್ರಮ ಮತ್ತು ಪೂರ್ವನಿದರ್ಶನಗಳನ್ನು ಉಲ್ಲೇಖಿಸಿ ನಿಯಮ ಪಾಲಿಸಿ ಈ ಮಾತನ್ನು ಹೇಳುತ್ತಿದ್ದೇನೆ. 

ಪ್ರಧಾನ ಮಂತ್ರಿಗಳು ಅವರಾಗಿಯೇ ಬಂದು ಹೇಳಿಕೆ ನೀಡಲು ಬಯಸಿದರೆ ನೀಡಬಹುದು. ಈ ಪೀಠದಿಂದ ಈ ರೀತಿಯ ನಿರ್ದೇಶನವನ್ನು ನೀಡಲಾಗುವುದಿಲ್ಲ, ನಿಯಮ ಹೊರಡಿಸುವುದೂ ಇಲ್ಲ ಎಂದು ದೃಢವಾಗಿ ಹೇಳಿದರು. 

ಗದ್ದಲದ ನಡುವೆ, ಪೀಠವು ನಿಗದಿತ ಶೂನ್ಯ ಅವಧಿಯೊಂದಿಗೆ ಮುಂದುವರಿಯಿತು. ಸಭಾಧ್ಯಕ್ಷರು ಅವರ ಬೇಡಿಕೆಯನ್ನು ಒಪ್ಪದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕರು ಸಭಾತ್ಯಾಗ ನಡೆಸಿದರು. ಸಾಂವಿಧಾನಿಕ ಬಾಧ್ಯತೆ ಮತ್ತು ಜನರಿಗೆ ಕರ್ತವ್ಯ ನಿರ್ವಹಣೆಯಿಂದ ಹೊರನಡೆದಿದ್ದಾರೆ ಎಂದು ಸಭಾಧ್ಯಕ್ಷ ಧಂಖರ್ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com