ರಾಜಸ್ಥಾನ: ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರ, ಇಟ್ಟಿಗೆ ಗೂಡಿನ ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆ!
ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಭೀಕರ ರೀತಿಯಲ್ಲಿ 14 ವರ್ಷದ ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಲಾಗಿದ್ದು, ಇಟ್ಟಿಗೆ ಗೂಡಿನ ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
Published: 03rd August 2023 05:02 PM | Last Updated: 03rd August 2023 05:41 PM | A+A A-

ಅಪ್ರಾಪ್ತ ಬಾಲಕಿಯ ಮೃತದೇಹ ಪತ್ತೆಯಾದ ಸ್ಥಳ
ಬಿಲ್ವಾರ: ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿ ಭೀಕರ ರೀತಿಯಲ್ಲಿ 14 ವರ್ಷದ ಹದಿಹರೆಯದ ಬಾಲಕಿ ಮೇಲೆ ಅತ್ಯಾಚಾರವೆಸಲಾಗಿದ್ದು, ಇಟ್ಟಿಗೆ ಗೂಡಿನ ಬಳಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯನ್ನು ಇಟ್ಟಿಗೆ ಗೂಡಿನ ಒಲೆಗೆ ಎಸೆಯುವ ಮೊದಲು ದುಷ್ಕರ್ಮಿಗಳು ಅತ್ಯಾಚಾರವೆಸಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಬುಧವಾರ ತಡರಾತ್ರಿ ನಾಪತ್ತೆಯಾದ ಬಾಲಕಿಯನ್ನು ಆಕೆಯ ಕುಟುಂಬ ಸದಸ್ಯರು ಹುಡುಕುತ್ತಿದ್ದಾಗ ಇಟ್ಟಿಗೆ ಗೂಡು ಬಳಿ ಆಕೆಯ ಪಾದರಕ್ಷೆಗಳನ್ನು ನೋಡಿದ್ದಾರೆ. ನಂತರ ಒಳಗೆ ಇಣುಕಿ ನೋಡಿದಾಗ ಆಕೆಯ ಬಳೆ ಮತ್ತು ಕೆಲವು ಮೂಳೆಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲ್ಬೆಲಿಯಾ ಅಲೆಮಾರಿ ಬುಡಕಟ್ಟಿನ ಕೆಲವರನ್ನು ಸ್ಥಳೀಯರು ಹಿಡಿದು, ಅಪರಾಧದಲ್ಲಿ ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಇಟ್ಟಿಗೆ ಗೂಡು ನಿರ್ವಹಿಸುವ ಮತ್ತು ಅದರ ಸಮೀಪ ವಾಸಿಸುವ ಅಲೆಮಾರಿ ಸಮುದಾಯದ ಸುಮಾರು 4-5 ಜನರನ್ನು ಬಂಧಿಸಲಾಗಿದ್ದು, ಕೋಟ್ಡಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಕ್ಕೆ ತೆರಳಿ ಸಂತ್ರಸ್ತೆಯ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡ ಕಲುಲಾಲ್ ಗುರ್ಜರ್, ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆಯ ದೇಹವನ್ನು ಇಟ್ಟಿಗೆ ಗೂಡಿನ ಒಲೆಯಲ್ಲಿ ಸುಟ್ಟು ಹಾಕಲಾಗಿದೆ ಎಂದು ಆರೋಪಿಸಿದರು. ಈ ಪ್ರಕರಣದಲ್ಲಿ ಪೊಲೀಸರು ತ್ವರಿತವಾಗಿ ಕ್ರಮ ಕೈಗೊಂಡಿಲ್ಲ ಮತ್ತು ಗ್ರಾಮಸ್ಥರು ಹಿಡಿದ ನಂತರವೇ ಶಂಕಿತ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಗುರ್ಜರ್ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಅತ್ಯಾಚಾರದ ಸಾಧ್ಯತೆಯನ್ನು ಇನ್ನೂ ತಳ್ಳಿಹಾಕಿಲ್ಲ ಎಂದು ಪೊಲೀಸರು ತಿಳಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.