ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಬಿಗ್ ರಿಲೀಫ್: 2 ವರ್ಷ ಜೈಲು ಶಿಕ್ಷೆಗೆ 'ಸುಪ್ರೀಂ' ಮಧ್ಯಂತರ ತಡೆ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ 2 ವರ್ಷಗಳ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ 2 ವರ್ಷಗಳ ಶಿಕ್ಷೆಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ.

ಇದೀಗ ರಾಹುಲ್ ಗಾಂಧಿ ಸಂಸದ ಸ್ಥಾನದ ಅನರ್ಹತೆಯಿಂದ ಬಚಾವ್ ಆಗಿದ್ದು, ಕೇರಳದ ವೈಯನಾಡು ಲೋಕಸಭೆ ಕ್ಷೇತ್ರದ ಸಂಸದರಾಗಿ ಮುಂದುವರಿಯಲಿದ್ದಾರೆ.

ಪ್ರಕರಣ ಸಂಬಂಧ ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯನ್ನು ತಡೆಹಿಡಿಯಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಿಕ್ಷೆಗೆ ಮಧ್ಯಂತರ ತಡೆ ನೀಡಿದೆ. ರಾಹುಲ್ ಗಾಂಧಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.

ಗರಿಷ್ಠ ಶಿಕ್ಷೆಯನ್ನು ನೀಡುವಾಗ ವಿಚಾರಣಾ ನ್ಯಾಯಾಲಯವು ಅದರ ಕಾರಣಗಳನ್ನು ಬಹಿರಂಗಪಡಿಸಲಿಲ್ಲ ಎಂದು ಹೇಳಿದೆ. ನ್ಯಾಯಾಧೀಶರು ಅವರಿಗೆ 2 ವರ್ಷಕ್ಕಿಂತ ಕಡಿಮೆ ಶಿಕ್ಷೆಯನ್ನು ನೀಡಿದ್ದಾರೆ, ವಯನಾಡ್ ಸಂಸದರಾಗಿ ಅನರ್ಹಗೊಳಿಸಲು ಕಾರಣವಾದ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 8 (3) ರ ನಿಬಂಧನೆಗಳು ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿ ಬಿಆರ್ ಗವಾಯಿ ನೇತೃತ್ವದ  ಪೀಠವು ಅಭಿಪ್ರಾಯಪಟ್ಟಿದೆ.

ವಿಚಾರಣಾ ನ್ಯಾಯಾಧೀಶರು, ಅವರು ಹೊರಡಿಸಿದ ಆದೇಶದಲ್ಲಿ ಗರಿಷ್ಠ ಎರಡು ವರ್ಷಗಳ ಶಿಕ್ಷೆಯನ್ನು ವಿಧಿಸಿದ್ದಾರೆ. ವಿಚಾರಣಾ ನ್ಯಾಯಾಧೀಶರು ಎರಡು ವರ್ಷಗಳ ಗರಿಷ್ಠ ಶಿಕ್ಷೆಯನ್ನು ಏಕೆ ವಿಧಿಸಿದ್ದಾರೆ ಎಂಬುದಕ್ಕೆ ಬೇರೆ ಯಾವುದೇ ಕಾರಣವನ್ನು ನೀಡಲಾಗಿಲ್ಲ. ಎರಡು ವರ್ಷಗಳ ಗರಿಷ್ಠ ಶಿಕ್ಷೆಯಲ್ಲಿ ಮಾತ್ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 8 (3) ರ ನಿಬಂಧನೆಗಳು ಕಾರ್ಯರೂಪಕ್ಕೆ ಬಂದಿವೆ ಎಂಬುದನ್ನು ಗಮನಿಸಬೇಕು.

ನೀವು ಹೇಳಿಕೆಗಳನ್ನು ನೀಡುವಾಗ ಎಚ್ಚರದಿಂದ ಮಾತನಾಡಬೇಕು. ಅಂದಿನ ನಿಮ್ಮ ಹೇಳಿಕೆ ಒಳ್ಳೆಯ ಉದ್ದೇಶದಿಂದ ಕೂಡಿರಲಿಲ್ಲ. ಇನ್ಮುಂದೆ ಜಾಗೃತೆ ವಹಿಸಿ. ನಿಮ್ಮನ್ನು ಸಂಸದ ಸ್ಥಾನದಿಂದ ಅನರ್ಹತೆ ಮಾಡೋದರಿಂದ ನಷ್ಟ ಆಗಲಿದೆ ಎಂದ ಸುಪ್ರೀಂ ಕೋರ್ಟ್​, ಜೈಲು ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.  ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಸಂಸದ ಸ್ಥಾನದಿಂದ ಮುಂದುವರಿಯಲಿದ್ದಾರೆ. ಅನರ್ಹತೆಯಿಂದ ಪಾರಾಗಿದ್ದಾರೆ. ರಾಹುಲ್ ಗಾಂಧಿ ಮತ್ತೆ ಲೋಕಸಭಾ ಚುನಾವಣೆಗೂ ಸ್ಪರ್ಧಿಸಬಹುದಾಗಿದೆ.

ನಾನು ಮೋದಿ ಸರ್ ನೇಮ್ ಹೇಳಿಕೆಗೆ ಕ್ಷಮೆ ಕೇಳಲ್ಲ. ಮೋದಿ ಹೆಸರಿನ ಯಾವುದೇ ಸಮುದಾಯ, ಸಮಾಜ ಇಲ್ಲ. ಹೀಗಾಗಿ ಸಮುದಾಯ, ಸಮಾಜಕ್ಕೆ ಮಾನನಷ್ಟ ಎಂಬುವುದು ‌ತಪ್ಪು. ಮಾಡದ ತಪ್ಪಿಗೆ ಕ್ಷಮೆ ಕೇಳುವಂತೆ ಆಗ್ರಹಿಸುವುದು ನ್ಯಾಯಾಂಗ ವ್ಯವಸ್ಥೆಯ ದುರುಪಯೋಗ. ಕೇಸ್ ರದ್ದುಪಡಿಸಿ ಲೋಕಸಭಾ ಸದಸ್ಯರಾಗಿ ಮುಂದುವರಿಯಲು ಅವಕಾಶ ನೀಡಬೇಕು. ಒಂದು ವೇಳೆ ಹೇಳಿಕೆಗೆ ಕ್ಷಮೆ ಕೇಳುವುದಾಗಿದ್ದರೆ ಹಿಂದೆಯೇ ಕೇಳುತ್ತಿದ್ದೆ. ಮೋದಿ ಸರ್ ನೇಮ್ ಹೊಂದಿರುವವರು ಭಿನ್ನಭಿನ್ನ ಸಮುದಾಯ, ಸಮಾಜಕ್ಕೆ ಸೇರಿದ್ದಾರೆ. ನೀರವ್ ಮೋದಿ, ಲಲಿತ್ ಮೋದಿ, ಮೆಹುಲ್ ಚೋಕ್ಸಿ ಒಂದೇ ಜಾತಿಗೆ ಸೇರಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ.

ದೂರುದಾರ ಪೂರ್ಣೇಶ್ ಮೋದಿ ಹಾಗೂ ಮೋದಿ ವಾಮಿಕ ಸಮಾಜಕ್ಕೆ ಸೇರಿದ್ದಾರೆ. ಮೋದಿ ಸರ್ ನೇಮ್ ಬೇರೆ ಜಾತಿಗಳಲ್ಲಿಯೂ ಇದೆ ಎಂದು ಪೂರ್ಣೇಶ್ ಮೋದಿ ಒಪ್ಪಿಕೊಂಡಿದ್ದಾರೆ. ರಾಹುಲ್ ಗಾಂಧಿಯ ವಿರುದ್ಧ ಎದುರಾಳಿ ರಾಜಕೀಯ ಪಕ್ಷದ ನಾಯಕರು‌ ಕೇಸ್​ಗಳನ್ನು ಹಾಕಿದ್ದಾರೆ. ಯಾವುದೇ ಕೇಸ್ ನಲ್ಲೂ ರಾಹುಲ್ ಗಾಂಧಿ ಅಪರಾಧಿ ಎಂದು ತೀರ್ಪು ಬಂದಿಲ್ಲ ಎಂದು ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್​ಗೆ ಹೇಳಿದ್ದರು.

ಗುಜರಾತ್ ಸರ್ಕಾರದ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು 2019 ರಲ್ಲಿ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಎಲ್ಲ ಕಳ್ಳರ ಸರ್ ನೇಮ್ ಮೋದಿ ಎಂದೇ ಯಾಕಿದೆ? ಎಂದು ಕೇಳಿದ್ದರು. ಈ ಹೇಳಿಕೆಯಿಂದ ರಾಹುಲ್ ಮೋದಿ ಹೆಸರಿರುವವರನ್ನು ಅವಮಾನಿಸಿದ್ದಾರೆ ಎಂದು ಪೂರ್ಣೇಶ್ ಮೋದಿ ದೂರು ದಾಖಲಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com