ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 13 ನಿಲ್ದಾಣಗಳ ಪುನರಾಭಿವೃದ್ಧಿ: ಯಾವ ನಿಲ್ದಾಣಗಳವು?

ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ವಿಡಿಯೋ ಕಾನ್ಫರೆನ್ಸ್ ಮೂಲಕ 508 ರೈಲು ನಿಲ್ದಾಣಗಳನ್ನು ನವೀಕರಿಸುವ ಯೋಜನೆಯನ್ನು ಪ್ರಧಾನಿ ಮೋದಿ ಪ್ರಾರಂಭಿಸಿದರು.
ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ/ಬೆಂಗಳೂರು: ದೇಶಾದ್ಯಂತ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಭಾನುವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ವಿಡಿಯೋ ಕಾನ್ಫರೆನ್ಸ್ ಮೂಲಕ 508 ರೈಲು ನಿಲ್ದಾಣಗಳನ್ನು ನವೀಕರಿಸುವ ಯೋಜನೆಯನ್ನು ಪ್ರಧಾನಿ ಮೋದಿ ಪ್ರಾರಂಭಿಸಿದರು. ಈ ಪೈಕಿ ಕರ್ನಾಟಕದ 13 ರೈಲು ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ 8 ನಿಲ್ದಾಣಗಳು ಅಭಿವೃದ್ಧಿ ಕಾಣಲಿವೆ. 

ಮರು-ಅಭಿವೃದ್ಧಿ ಮಾಡಬೇಕಾದ ನಿಲ್ದಾಣಗಳ ಪಟ್ಟಿ: ಈ 508 ನಿಲ್ದಾಣಗಳ ಪೈಕಿ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 55, ಬಿಹಾರದಲ್ಲಿ 49, ಮಹಾರಾಷ್ಟ್ರದಲ್ಲಿ 44, ಪಶ್ಚಿಮ ಬಂಗಾಳದಲ್ಲಿ 37, ಮಧ್ಯಪ್ರದೇಶದಲ್ಲಿ 34, ಅಸ್ಸಾಂನಲ್ಲಿ 32, ಒಡಿಶಾದ 25, ಪಂಜಾಬ್‌ನಲ್ಲಿ 22, ಗುಜರಾತ್ ಮತ್ತು ತೆಲಂಗಾಣದಲ್ಲಿ ತಲಾ 21, ಜಾರ್ಖಂಡ್‌ನಲ್ಲಿ 20, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ 18, ಹರಿಯಾಣದಲ್ಲಿ 15, ಕರ್ನಾಟಕದಲ್ಲಿ 13 ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಹರಡಿವೆ. 

ರಾಜ್ಯದ ಯಾವ್ಯಾವ ರೈಲು ನಿಲ್ದಾಣಗಳ ಅಭಿವೃದ್ಧಿ?: ಕರ್ನಾಟಕದ ಬಳ್ಳಾರಿ, ಬೆಳಗಾವಿ ಜಿಲ್ಲೆಯ ಘಟಪ್ರಭ, ಗೋಕಾಕ್‌ ರಸ್ತೆ, ಬೀದರ್‌ ರೈಲು ನಿಲ್ದಾಣ, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಜಂಕ್ಷನ್‌, ದಾವಣಗೆರೆ ಜಿಲ್ಲೆಯ ಹರಿಹರ, ಧಾರವಾಡ ಜಿಲ್ಲೆಯ ಅಳ್ನಾವರ, ಗದಗ, ಹಾಸನ ಜಿಲ್ಲೆಯ ಅರಸೀಕೆರೆ, ಕಲಬುರಗಿ ಜಿಲ್ಲೆಯ ಕಲಬುರಗಿ ಜಂಕ್ಷನ್, ಶಹಾಬಾದ್‌, ವಾಡಿ, ಕೊಪ್ಪಳ ಸೇರಿ 13 ರೈಲು ನಿಲ್ದಾಣಗಳು ಪುನರಾಭಿವೃದ್ಧಿಯಾಗುತ್ತಿದೆ. 

ಹಾಸನದ ಅರಸೀಕೆರೆ ರೈಲ್ವೆ ಸ್ಟೇಷನ್ ಅಭಿವೃದ್ಧಿಪಡಿಸಲು ಆದ್ಯತೆ ನೀಡಲಾಗಿದೆ. ಅರಸೀಕೆರೆ ರೈಲ್ವೆ ನಿಲ್ದಾಣದ ಬಳಿ ಕಾರ್ಯಕ್ರಮ ಆಯೋಜಿಸಲಾಗಿದೆ. ಧಾರವಾಡ ಜಿಲ್ಲೆಯ ಅಳ್ನಾವರ ರೈಲು ನಿಲ್ದಾಣವನ್ನು ನವೀಕರಣಗೊಳಿಸಲಾಗುವುದು. ರೈಲು ನಿಲ್ದಾಣದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ ಭಾಗಿಯಾಗಿದ್ದಾರೆ. 

ಗದಗ ರೈಲ್ವೆ ನಿಲ್ದಾಣವನ್ನು ನವೀಕರಣಕ್ಕೆ ಆಯ್ಕೆ ಮಾಡಲಾಗಿದೆ. ನಗರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗದಗ ಸಂಸದ ಶಿವಕುಮಾರ ಉದಾಸಿ, ಸಚಿವ ಹೆಚ್ ಕೆ ಪಾಟೀಲ್, ರೈಲ್ವೆ ಅಧಿಕಾರಿಗಳು ಭಾಗಿಯಾಗಿದ್ದಾರೆ.  ಕೊಪ್ಪಳ ರೈಲ್ವೆ ನಿಲ್ದಾಣ ಮರು ಅಭಿವೃದ್ಧಿ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಕೊಪ್ಪಳ ಸಂಸದ ಕರಡಿ ಸಂಗಣ್ಣ,ರೈಲ್ವೆ ಅಧಿಕಾರಿಗಳು ಭಾಗಿಯಾದರು. 

ಕಲಬುರಗಿ ಜಿಲ್ಲೆಯ ನಾಲ್ಕು ರೈಲು ನಿಲ್ದಾಣಗಳನ್ನು 113 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಗೊಳಿಸಲಾಗುವುದು. ಶಹಬಾದ್ ರೈಲು ನಿಲ್ದಾಣದಿಂದ ಹೆಚ್ ಕೆ ಶರ್ಮಾ, ಡ್ಯಪೂಟಿ ಇಂಜನೀಯರ್ ಸೊಲ್ಲಾಪುರ ಡಿವಿಜನ್ ಪಾಲ್ಗೊಳ್ಳುತ್ತಾರೆ. ವಾಡಿ ರೈಲು ನಿಲ್ದಾಣದಿಂದ ಆಯುಷ್ ಮೆಹತೋ, ಡೆಪ್ಯುಟಿ ಸುಪರಿಡೆಂಟ್ ಟ್ರಾಪಿಕ್ ಇಂಜನೀಯರ್, ಸೊಲ್ಲಾಪುರ ಡಿವಿಜನ್ ಭಾಗಿಯಾಗಿದ್ದಾರೆ. 

ಕಲಬುರಗಿ ರೈಲ್ವೆ ನಿಲ್ದಾಣಕ್ಕೆ 29.55 ಕೋಟಿ ರೂಪಾಯಿ, ಶಹಬಾದ್ ರೈಲು ನಿಲ್ದಾಣಕ್ಕೆ 26.76 ಕೋಟಿ ರೂಪಾಯಿ, ವಾಡಿ ರೈಲು ನಿಲ್ದಾಣ 36.32 ಕೋಟಿ ರೂಪಾಯಿ, ಗಾಣಗಾಪುರ ರೋಡ್ ರೈಲು ನಿಲ್ದಾಣ 20.78 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಚಾಲನೆ ದೊರೆಯಲಿದೆ.

ಬೆಳಗಾವಿ ಜಿಲ್ಲೆಯ ಘಟಪ್ರಭಾ ಮತ್ತು ಗೋಕಾಕ್ ರೋಡ್ ನಿಲ್ದಾಣಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿ, ಸಂಸದೆ ಮಂಗಲಾ ಅಂಗಡಿ, ಶಾಸಕರಾದ ದುರ್ಯೋಧನ ಐಹೊಳೆ ಭಾಗಿಯಾಗಲಿದ್ದಾರೆ. ರೈಲ್ವೆ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ಬಿಜೆಪಿ ಕಾರ್ಯಕರ್ತರು, ಸ್ಥಳೀಯರು ಕೂಡ ಪಾಲ್ಗೊಳ್ಳಲಿದ್ದಾರೆ. ಎರಡು ರೇಲ್ವೆ ನಿಲ್ದಾಣಕ್ಕೆ 35 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ.

ಬೀದರ ರೈಲು ನಿಲ್ದಾಣಕ್ಕೂ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ಇದರ ಪುನರಾಭಿವೃದ್ದಿ ಕಾಮಗಾರಿಯ ಶಂಕುಸ್ಥಾಪನೆಯನ್ನು ಇಂದು ನೆರವೇರಲಿದೆ. 17 ಕೋಟಿ ರೂಪಾಯಿ ವೆಚ್ಚದಲ್ಲಿ ಬಳ್ಳಾರಿ ರೈಲು ನಿಲ್ದಾಣದವನ್ನು ಮರು ಅಭಿವೃದ್ಧಿಪಡಿಸಲಾಗುವುದು. ಬಳ್ಳಾರಿ ಸಂಸದ ವೈ. ದೇವರಂದ್ರಪ್ಪಾ, ಸಚಿವ ನಾಗೇಂದ್ರ ಭಾಗಿಯಾಗಲಿದ್ದಾರೆ.

ಮೈಸೂರು ವಿಭಾಗದ ಹರಿಹರ ರೈಲು ನಿಲ್ದಾಣವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಹರಿಹರದ ರೈಲ್ವೆ ನಿಲ್ದಾಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಂಸದರಾದ ಡಾ. ಜಿ.ಎಂ.ಸಿದ್ದೇಶ್ವರ ಹಾಗೂ ಹರಿಹರ ವಿಧಾನಸಭಾ ಕ್ಷೇತ್ರದ ಬಿ.ಪಿ.ಹರೀಶ್ ಉಪಸ್ಥಿತರಿರುವರು. 19.32 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಪುನರ್ ಅಭಿವೃದ್ಧಿಪಡಿಸಲಾಗುತ್ತದೆ. 

ಅಮೃತ್ ಭಾರತ್ ಸ್ಟೇಷನ್ ಯೋಜನೆ: ಫೆಬ್ರವರಿಯಲ್ಲಿ ಪ್ರಾರಂಭವಾದ ಅಮೃತ್ ಭಾರತ್ ಸ್ಟೇಷನ್ ಯೋಜನೆಯು ರೈಲು ನಿಲ್ದಾಣಗಳ ಅಭಿವೃದ್ಧಿಯನ್ನು ಮಾಡುತ್ತದೆ. ಇದು ನಿಲ್ದಾಣಗಳಲ್ಲಿನ ಸೌಕರ್ಯಗಳನ್ನು ಸುಧಾರಿಸಲು 'ಮಾಸ್ಟರ್ ಪ್ಲಾನ್'ಗಳ ತಯಾರಿಕೆ ಮತ್ತು ಹಂತಗಳಲ್ಲಿ ಅವುಗಳ ಅನುಷ್ಠಾನವನ್ನು ಒಳಗೊಂಡಿರುತ್ತದೆ. ದೇಶಾದ್ಯಂತ 1,309 ನಿಲ್ದಾಣಗಳನ್ನು ಪುನರಾಭಿವೃದ್ಧಿ ಮಾಡಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com