ನವದೆಹಲಿ: ವೈಎಸ್‌ಆರ್‌ಟಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುತ್ತಾರೆ ಎಂಬ ಊಹಾಪೋಹಗಳ ನಡುವೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಎಐಸಿಸಿ ಉನ್ನತ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿಯಾದರು.
ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ನಂತರ ಶರ್ಮಿಳಾ ಕಾಂಗ್ರೆಸ್‌ಗೆ ಹತ್ತಿರವಾಗುತ್ತಿದ್ದಾರೆ ಎಂಬ ಊಹಾಪೋಹಗಳು ಸ್ವಲ್ಪ ಸಮಯದಿಂದ ಹರಿದಾಡುತ್ತಿವೆ. ಇದೀಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿರುವುದು ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ಬಂದಂತಾಗಿದೆ.
ಸೋನಿಯಾ, ರಾಹುಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮಿಳಾ, ರಚನಾತ್ಮಕ ಚರ್ಚೆಗಳು ನಡೆದವು. ನಾನು ಒಂದು ವಿಷಯ ಹೇಳಬಲ್ಲೆ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಸಿಆರ್ ಸೋಲಿಗೆ ಕ್ಷಣಗಣನೆ ಪ್ರಾರಂಭವಾಗಿದೆ ಎಂದು ಹೇಳಿದರು. ಶರ್ಮಿಳಾ ಅವರ ದೆಹಲಿ ಪ್ರವಾಸ ಹಾಗೂ ಕಾಂಗ್ರೆಸ್ ಉನ್ನತ ನಾಯಕರ ಭೇಟಿ ವಿಚಾರ ವೈಎಸ್‌ಆರ್‌ಟಿಪಿಯ ಯಾವುದೇ ನಾಯಕರು ಅಥವಾ ಕಾರ್ಯಕರ್ತರಿಗೆ ತಿಳಿದಿಲ್ಲ ಎಂದು ವೈಎಸ್‌ಆರ್ ತೆಲಂಗಾಣ ಕಾಂಗ್ರೆಸ್ ಪಕ್ಷದ ವಕ್ತಾರ ಕೊಂಡ ರಾಘವ ರೆಡ್ಡಿ ತಿಳಿಸಿದರು.
ತೆಲಂಗಾಣದ ಪಲೈರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಶರ್ಮಿಳಾ ಈ ಹಿಂದೆಯೇ ಸ್ಪಷ್ಟವಾಗಿ ಹೇಳಿದ್ದರು. ಆಂಧ್ರಪ್ರದೇಶದಲ್ಲಿ 2019 ರ ಅಸೆಂಬ್ಲಿ ಚುನಾವಣೆಯ ಸಮಯದಲ್ಲಿ ತಮ್ಮ ಒಡಹುಟ್ಟಿದ ಜಗನ್ ಮೋಹನ್ ರೆಡ್ಡಿಗಾಗಿ ತೀವ್ರ ಪ್ರಚಾರ ನಡೆಸಿದ್ದ ಶರ್ಮಿಳಾ ನಂತರ ತೆಲಂಗಾಣದಲ್ಲಿ ತಮ್ಮದೇ ಪಕ್ಷವಾದ YSRTP ಹುಟ್ಟು ಹಾಕಿದ್ದಾರೆ.
Advertisement