ನವದೆಹಲಿ: ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರ "ಎರಡು ಪ್ರಮುಖ ಪ್ರಮಾದಗಳು" - ಇಡೀ ಕಾಶ್ಮೀರ ಜನರು ಕಷ್ಟವನ್ನು ಅನುಭವಿಸುವಂತೆ ಮಾಡಿತು. ಇಡೀ ಕಾಶ್ಮೀರವನ್ನು ಗೆಲ್ಲದೆ ಕದನ ವಿರಾಮ ಘೋಷಿಸಿದ್ದು ಮತ್ತು ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯದ್ದು ಆ ಎರಡು ಪ್ರಮಾದಗಳು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯ ಮೇಲಿನ ಚರ್ಚೆಗೆ ನಿನ್ನೆ ಉತ್ತರಿಸಿದ ಗೃಹ ಸಚಿವ ಅಮಿತ್ ಶಾ, ನೆಹರೂ ಅವರು ಸರಿಯಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ, ದೊಡ್ಡ ಪ್ರದೇಶ ನಮ್ಮ ಕೈಯಿಂದ ಬಿಟ್ಟುಹೋಗುತ್ತಿರಲಿಲ್ಲ ಮತ್ತು ಇಂದು ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗವಾಗುತ್ತಿತ್ತು ಎಂದರು.
"ನಾನು ಇಲ್ಲಿ ಬಳಸಿರುವ ಪದವನ್ನು ಮತ್ತೆ ಪುನರುಚ್ಛರಿಸುತ್ತೇನೆ, ಅದು ನೆಹರೂರವರ ಪ್ರಮಾದ ತಪ್ಪು. ನೆಹರೂ ಕಾಲದಲ್ಲಿ ಮಾಡಿದ ಪ್ರಮಾದದಿಂದಾಗಿ ಕಾಶ್ಮೀರ ಜನರು ನೋವು ಅನುಭವಿಸುವಂತಾಯಿತು. ಜವಾಹರಲಾಲ್ ನೆಹರು ಅವರ ಅಧಿಕಾರಾವಧಿಯಲ್ಲಿ ಸಂಭವಿಸಿದ ಎರಡು ದೊಡ್ಡ ಪ್ರಮಾದಗಳು ಅವರ ನಿರ್ಧಾರಗಳಿಂದ ಸಂಭವಿಸಿದವು ಎಂದು ನಾನು ಈ ಸಂದರ್ಭದಲ್ಲಿ ಅತ್ಯಂತ ಜವಾಬ್ದಾರಿಯಿಂದ ಹೇಳಲು ಬಯಸುತ್ತೇನೆ, ಇದರಿಂದಾಗಿ ಕಾಶ್ಮೀರವು ವರ್ಷಗಳ ಕಾಲ ನರಳಬೇಕಾಯಿತು ಎಂದು ಹೇಳಿದರು.
ನೆಹರೂರವರು ಮಾಡಿದ ತಪ್ಪಿನಿಂದ ಕಾಶ್ಮೀರ ಜನರು ನರಳುವಂತಾಯಿತು. ಒಂದು ನಮ್ಮ ಸೇನೆ ಗೆದ್ದಾಗ ಪಂಜಾಬ್ ಪ್ರದೇಶವನ್ನು ತಲುಪಿದ ಕೂಡಲೇ ಕದನ ವಿರಾಮ ಘೋಷಿಸಲಾಯಿತು, ಆಗ ಪಾಕ್ ಆಕ್ರಮಿತ ಕಾಶ್ಮೀರ ಹುಟ್ಟಿಕೊಂಡಿತು. ಮೂರು ದಿನಗಳ ನಂತರ ಕದನ ವಿರಾಮ ಘೋಷಿಸುತ್ತಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು ಎಂದರು.
ಇಡೀ ಕಾಶ್ಮೀರವನ್ನು ಗೆಲ್ಲದೆ ಕದನ ವಿರಾಮ ಘೋಷಿಸಿದ್ದು ಒಂದು ಪ್ರಮಾದವಾಗಿದ್ದರೆ, ಇನ್ನೊಂದು ಸಮಸ್ಯೆಯನ್ನು ವಿಶ್ವಸಂಸ್ಥೆ ಬಳಿ ತರಾತುರಿಯಲ್ಲಿ ತೆಗೆದುಕೊಂಡು ಹೋಗಿದ್ದು ಎಂದು ಗೃಹ ಸಚಿವರು ಸದನದಲ್ಲಿ ಹೇಳುತ್ತಿದ್ದಂತೆ ಹರೂ ಕುರಿತ ಟೀಕೆಗಳ ಬಗ್ಗೆ ಪ್ರತಿಪಕ್ಷಗಳ ಪೀಠಗಳಿಂದ ಕೋಲಾಹಲ ಉಂಟಾಯಿತು, ಕಲಾಪ ಬಹಿಷ್ಕರಿಸಿ ಹೊರನಡೆದರು ಆದರೆ ಕೊನೆಗೆ ಹಿಂತಿರುಗಿದರು.
ವಿರೋಧ ಪಕ್ಷ ಸದಸ್ಯರ ಬಹಿಷ್ಕಾರ ನಂತರ ಬಿಜೆಪಿ ಸದಸ್ಯ ಭರ್ತೃಹರಿ ಮಹತಾಬ್, ಗೃಹ ಸಚಿವರು "ಹಿಮಾಲಯ ಪ್ರಮಾದ" ಬಗ್ಗೆಯೂ ಮಾತನಾಡಬೇಕು, 1962 ರಲ್ಲಿ ಚೀನಾದೊಂದಿಗಿನ ಯುದ್ಧಕ್ಕೆ ಕಾರಣವಾದ ನೆಹರೂ ಅವರ ಕ್ರಮಗಳ ಉಲ್ಲೇಖವಾಗಿದೆ ಎಂದರು.
ಆಗ ಅಮಿತ್ ಶಾ ಅವರು, ಕಾಶ್ಮೀರದ ಬಗ್ಗೆ ನೆಹರೂ ಮಾಡಿದ್ದ ಎರಡು ಪ್ರಮಾದಗಳ ಬಗ್ಗೆ ನಾನು ಮಾತನಾಡಿರುವುದು ಪ್ರತಿಪಕ್ಷಗಳ ಸದಸ್ಯರನ್ನು ಅಸಮಾಧಾನಗೊಳಿಸಿದೆ, ಇನ್ನು "ಹಿಮಾಲಯನ್ ಪ್ರಮಾದ" ಬಗ್ಗೆ ಮಾತನಾಡಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು ಎಂದು ವ್ಯಂಗ್ಯವಾಡಿದರು.
ಇದಕ್ಕೆ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಗೃಹ ಸಚಿವರು ಮಾಡಿರುವ ಟೀಕೆಗಳು ಯಾರನ್ನೂ ಅವಮಾನಿಸುವಂತಿಲ್ಲ. ಕೇವಲ ಈ ಸನ್ನಿವೇಶದಲ್ಲಿ ವಿಷಯ ಹೇಳಿದ್ದಾರೆ.
ಅಮಿತ್ ಶಾ ಅವರು ಹೇಳಿದ್ದೇನು? ಕಾಶ್ಮೀರ ವಿವಾದ ವಿಚಾರವನ್ನು ವಿಶ್ವಸಂಸ್ಥೆಗೆ ಕೊಂಡೊಯ್ಯಬೇಕಾದರೆ, ಅದನ್ನು ವಿಶ್ವಸಂಸ್ಥೆ ಚಾರ್ಟರ್ ಸಂವಿಧಾನ ವಿಧಿ 35 ರ ಬದಲಿಗೆ ಆರ್ಟಿಕಲ್ 51 ರ ಅಡಿಯಲ್ಲಿ ಕಳುಹಿಸಬೇಕಿತ್ತು ಎಂದರು. ಈ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ತೆಗೆದುಕೊಂಡು ಹೋಗಬಾರದಿತ್ತು. ಕದನ ವಿರಾಮವು "ತಪ್ಪು" ಎಂದು ನೆಹರೂ ನಂತರ ಹೇಳಿದ್ದನ್ನೂ ಶಾ ಉಲ್ಲೇಖಿಸಿದರು.
"ಈ ದೇಶದ ತುಂಬಾ ಭೂಮಿ ಕಳೆದುಹೋಯಿತು, ಇದು ಐತಿಹಾಸಿಕ ಪ್ರಮಾದ" ಎಂದು ಗೃಹ ಸಚಿವರು ತಮ್ಮ ಮಾತನ್ನು ಸಮರ್ಥಿಸಿಕೊಂಡರು.
Advertisement