ಮಧ್ಯ ಪ್ರದೇಶ ವಿಧಾನಸಭೆಯಿಂದ ನೆಹರು ಭಾವಚಿತ್ರ ತೆಗೆದ ಬಿಜೆಪಿ ಸರ್ಕಾರ; ಕಾಂಗ್ರೆಸ್ ಖಂಡನೆ

ಮಧ್ಯ ಪ್ರದೇಶ ನೂತನ ಬಿಜೆಪಿ ಸರ್ಕಾರ ವಿಧಾನಸಭೆಯಿಂದ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ತೆಗೆದುಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.
ನೆಹರು ಫೋಟೋ ತೆಗೆದು ಅಂಬೇಡ್ಕರ್ ಫೋಟೋ ಅಳವಡಿಸಿರುವುದು
ನೆಹರು ಫೋಟೋ ತೆಗೆದು ಅಂಬೇಡ್ಕರ್ ಫೋಟೋ ಅಳವಡಿಸಿರುವುದು

ಭೋಪಾಲ್: ಮಧ್ಯ ಪ್ರದೇಶ ನೂತನ ಬಿಜೆಪಿ ಸರ್ಕಾರ ವಿಧಾನಸಭೆಯಿಂದ ಮಾಜಿ ಪ್ರಧಾನಿ ದಿವಂಗತ ಜವಾಹರಲಾಲ್ ನೆಹರು ಅವರ ಭಾವಚಿತ್ರವನ್ನು ತೆಗೆದುಹಾಕಿದೆ ಎಂದು ಕಾಂಗ್ರೆಸ್ ಆರೋಪಿಸಿದ ನಂತರ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಅವರ ಪುತ್ರ ಮತ್ತು ಕಾಂಗ್ರೆಸ್ ಮುಖಂಡ ಜೈವರ್ಧನ್ ಸಿಂಗ್ ಅವರು, ಬಿಜೆಪಿ ಅಥವಾ ಯಾರೇ ಫೋಟೋ ತೆಗೆದರೂ ಅದು ತಪ್ಪು. ಈ ಬಗ್ಗೆ ಹಂಗಾಮಿ ಸ್ಪೀಕರ್ ಗೋಪಾಲ್ ಭಾರ್ಗವ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ.

ಸದನದಿಂದ ಜವಾಹರಲಾಲ್ ನೆಹರು ಫೋಟೋ ತೆಗೆದಿರುವುದು ವಿಷಾದನೀಯ ಎಂದಿರುವ ಕಾಂಗ್ರೆಸ್ ನಾಯಕ, ಒಂದಾಗಿದ್ದ ಭಾರತ ಮತ್ತು ಪಾಕಿಸ್ತಾನಕ್ಕೆ ಒಟ್ಟಿಗೆ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಪಾಕಿಸ್ತಾನದ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಜವಾಹರಲಾಲ್ ನೆಹರು ಅವರಿಂದಾಗಿ ಭಾರತದ ಪ್ರಜಾಪ್ರಭುತ್ವದ ಬುನಾದಿ ಗಟ್ಟಿಯಾಗಿದೆ. ಬಿಜೆಪಿ ಅಥವಾ ಬೇರೆ ಯಾರೇ ನೆಹರು ಫೋಟೋ ತೆಗೆದರೂ ಅದು ತಪ್ಪಾಗುತ್ತದೆ. ನಾನು ಹಂಗಾಮಿ ಸ್ಪೀಕರ್ ಜೊತೆ ಚರ್ಚಿಸುತ್ತೇನೆ ಎಂದು ಜೈವರ್ಧನ್ ಸಿಂಗ್ ತಿಳಿಸಿದ್ದಾರೆ.

ವಿಶೇಷವೆಂದರೆ, ವಿಧಾನಸಭೆಯಲ್ಲಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ತೆಗೆದು, ಆ ಸ್ಥಳದಲ್ಲಿ ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಅಳವಡಿಸಲಾಗಿದೆ.

ಮುಂದಿನ ದಿನಗಳಲ್ಲಿ ವಿಧಾನಸಭೆಯಿಂದ ಭೀಮರಾವ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆಗೆದು ನಾಥೂರಾಮ್ ಗೋಡ್ಸೆ ಅವರ ಭಾವಚಿತ್ರವನ್ನು ಬಿಜೆಪಿ ಹಾಕುತ್ತದೆ ಎಂದು ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರು ಹೇಳಿದ್ದಾರೆ.

"ಮಧ್ಯಪ್ರದೇಶ ವಿಧಾನಸಭೆಯಿಂದ ನೆಹರು ಅವರ ಭಾವಚಿತ್ರವನ್ನು ತೆಗೆದುಹಾಕಿರುವುದನ್ನು ನಾವು ಖಂಡಿಸುತ್ತೇವೆ" ಎಂದು ಪಕ್ಷದ ವಕ್ತಾರ ಅಬ್ಬಾಸ್ ಹಫೀಜ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 'ಬಿಜೆಪಿ ಅಧಿಕಾರಕ್ಕೆ ಬಂದಿರುವುದು ದುರಾದೃಷ್ಟಕರ. ಇತಿಹಾಸ ಅಳಿಸಲು ಬಿಜೆಪಿ ಹಗಲಿರುಳು ಶ್ರಮಿಸುತ್ತಿದೆ. ದಶಕಗಳ ಕಾಲ ವಿಧಾನಸಭೆಯಲ್ಲಿದ್ದ ದೇಶದ ಮೊದಲ ಪ್ರಧಾನಿ ಭಾವಚಿತ್ರವನ್ನು ಬಿಜೆಪಿ ತೆಗೆದಿದೆ. ಇದು ಬಿಜೆಪಿ ಅವರ ಮನಸ್ಥಿತಿಯನ್ನು ತೋರಿಸುತ್ತದೆ' ಎಂದು ವಾಗ್ದಾಳಿ ನಡೆಸಿದರು. ತೆಗೆದಿರುವ ಚಿತ್ರವನ್ನು ಕೂಡಲೇ ಮರುಸ್ಥಾಪಿಸಬೇಕು ಇಲ್ಲದಿದ್ದರೆ ನಾವೇ ನೆಹರೂ ಅವರ ಫೋಟೋವನ್ನು ಅದೇ ಸ್ಥಳದಲ್ಲಿ ಹಾಕುತ್ತೇವೆ ಎಂದು ಅಬ್ಬಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com