ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಮತ್ತೆ ಭೂ ಕುಸಿತ: ಸತತ ಮೂರನೇ ದಿನವೂ ರಸ್ತೆ ಬಂದ್
ರಾಂಬನ್ ಜಿಲ್ಲೆಯಲ್ಲಿ ಹೊಸದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬುಧವಾರ ಸತತ ಮೂರನೇ ದಿನವೂ ಸಂಚಾರಕ್ಕೆ ಬಂದ್ ಮಾಡಲಾಗಿದ್ದು, 800ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿವೆ.
Published: 01st February 2023 01:50 PM | Last Updated: 01st February 2023 01:50 PM | A+A A-

ಜಮ್ಮು ಶ್ರೀನಗರ ಹೆದ್ದಾರಿ ಬಂದ್
ಜಮ್ಮು: ರಾಂಬನ್ ಜಿಲ್ಲೆಯಲ್ಲಿ ಹೊಸದಾಗಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಬುಧವಾರ ಸತತ ಮೂರನೇ ದಿನವೂ ಸಂಚಾರಕ್ಕೆ ಬಂದ್ ಮಾಡಲಾಗಿದ್ದು, 800ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸಿಲುಕಿಕೊಂಡಿವೆ.
ಕಾಶ್ಮೀರವನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಏಕೈಕ ಸರ್ವಋತು ರಸ್ತೆಯಾದ 270 ಕಿಲೋಮೀಟರ್ ಉದ್ದದ ಹೆದ್ದಾರಿಯನ್ನು ಮುಚ್ಚಲಾಗಿದೆ. ಸೋಮವಾರ ಜಿಲ್ಲೆಯ ಚಂದರಕೋಟೆ ಮತ್ತು ಬನಿಹಾಲ್ ನಡುವೆ ರಸ್ತೆಯಲ್ಲಿ ಭೂಕುಸಿತದಿಂದ ಕಲ್ಲು ಮತ್ತು ಮಣ್ಣು ತುಂಬಿದ್ದ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ನಿರ್ಬಂಧಿಸಲಾಗಿದೆ.
ಬುಧವಾರ ಬೆಳಗ್ಗೆ ಬನಿಹಾಲ್ ತಹಸಿಲ್‌ನ ರಾಮ್‌ಪರಿ ಪ್ರದೇಶದಲ್ಲಿ ಹೆದ್ದಾರಿಯಲ್ಲಿ ಭಾರಿ ಭೂಕುಸಿತ ಸಂಭವಿಸಿದೆ. ಇದಲ್ಲದೆ, ವ್ಯಾಗನ್‌ನಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಹೆದ್ದಾರಿಯನ್ನು ತೆರವುಗೊಳಿಸುವ ಕೆಲಸ ಸಾಗುತ್ತಿದೆ. ಏತನ್ಮಧ್ಯೆ, ಹೆದ್ದಾರಿಯಲ್ಲಿ ಸಂಚಾರ ಮಾಡದಂತೆ ಸಂಚಾರಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಹೆದ್ದಾರಿಯ ವಿವಿಧ ಸ್ಥಳಗಳಲ್ಲಿ 800 ಕ್ಕೂ ಹೆಚ್ಚು ವಾಹನಗಳು ಸಿಲುಕಿಕೊಂಡಿವೆ ಎಂದು ಹೇಳಿದ್ದಾರೆ.
ಕಾಶ್ಮೀರದ ಶೋಪಿಯಾನ್ ಜಿಲ್ಲೆಯನ್ನು ಜಮ್ಮುವಿನ ಪೂಂಚ್ ಜಿಲ್ಲೆಗೆ ಸಂಪರ್ಕಿಸುವ ಮೊಘಲ್ ರಸ್ತೆಯು ಭಾರೀ ಹಿಮಪಾತದಿಂದಾಗಿ ಸಂಚಾರಕ್ಕೆ ನಿರ್ಬಂಧಿಸಲಾಗಿದೆ . ಜಮ್ಮು ಪ್ರದೇಶದ ಪರ್ವತ ಜಿಲ್ಲೆಗಳಲ್ಲಿ ಭಾರೀ ಹಿಮಪಾತದಿಂದಾಗಿ ಹಲವಾರು ಅಂತರ-ಜಿಲ್ಲಾ ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.