
ಜೋ ಬೈಡನ್-ಪ್ರಧಾನಿ ಮೋದಿ
ವಾಷಿಂಗ್ ಟನ್: ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಪ್ರಧಾನಿ ನರೇಂದ್ರ ಮೋದಿಗೆ ಅಮೇರಿಕಾ ಭೇಟಿಗೆ ಆಹ್ವಾನ ನೀಡಿದ್ದಾರೆ ಎಂದು ಪಿಟಿಐ ವರದಿ ಪ್ರಕಟಿಸಿದೆ.
ತಾತ್ವಿಕವಾಗಿ ಆಹ್ವಾನಕ್ಕೆ ಒಪ್ಪಿಗೆ ಸಿಕ್ಕಿದ್ದು ಉಭಯ ದೇಶಗಳ ಅಧಿಕಾರಿಗಳು ಸೂಕ್ತ ದಿನಾಂಕವನ್ನು ನಿರ್ಧರಿಸುವತ್ತ ಕೆಲಸ ಮಾಡುತ್ತಿದ್ದಾರೆ.
ಜಿ-20 ಶೃಂಗಸಭೆಯನ್ನು ಭಾರತ ಆಯೋಜಿಸುತ್ತಿದ್ದು, ಸೆಪ್ಟೆಂಬರ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಇತರ ರಾಷ್ಟ್ರಗಳ ನಾಯಕರೊಂದಿಗೆ ಬೈಡನ್ ಸಹ ಭಾಗವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಅಂದರೆ ಜುಲೈ ಹಾಗೂ ಜೂನ್ ನಲ್ಲಿ ಉಭಯ ನಾಯಕರ ಭೇಟಿಗೆ ಅಧಿಕಾರಿಗಳು ದಿನಾಂಕವನ್ನು ಹುಡುಕುತ್ತಿದ್ದಾರೆ.
ಇದನ್ನೂ ಓದಿ: ಜಾಗತಿಕ ಸವಾಲು ಎದುರಿಸಲು ಭಾರತಕ್ಕೆ ಅಮೆರಿಕಾದ ಸಹಕಾರ ವಿಸ್ತರಣೆ: ಆಂಟೋನಿ ಬ್ಲಿಂಕೆನ್
ಬೈಡನ್ ಈ ಆಹ್ವಾನವನ್ನು ಪ್ರಧಾನಿ ಮೋದಿಗೆ ಯಾವಾಗ ನೀಡಿದರು ಬೈಡನ್ ಆಹ್ವಾನವನ್ನು ಪ್ರಧಾನಿ ಕಚೇರಿಗೆ ಯಾರು ತಲುಪಿಸಿದರು? ಎಂಬ ಮುಂತಾದ ಮಾಹಿತಿಗಳನ್ನು ಸೂಕ್ಷ್ಮವಾದ ಕಾರಣಗಳಿಂದಾಗಿ ಅಧಿಕಾರಿಗಳು ಬಹಿರಂಗಪಡಿಸಿಲ್ಲ.
ಡಿಸೆಂಬರ್ ನಲ್ಲಿ ಬೈಡನ್ ಫ್ರಾನ್ಸ್ ನ ಅಧ್ಯಕ್ಷ ಎಮಾನುಯಲ್ ಮಾಕ್ರಾನ್ ಅವರಿಗೆ ಔತಣ ಕೂಟ ಏರ್ಪಡಿಸಿದ್ದರು. ಈಗ ಜಗತ್ತಿನ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಮುಂಚೂಣಿಯ ಆರ್ಥಿಕತೆಗಳಾಗಿರುವ ಭಾರತ- ಅಮೇರಿಕಾದ ಪಾಲುದಾರಿಕೆ ಅತ್ಯಗತ್ಯವಾಗಿದೆ ಎಂದು ಬೈಡನ್ ನಂಬಿದ್ದಾರೆಂದು ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.