ಅದಾನಿ ಹಗರಣ ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ: ಪ್ರತಿಪಕ್ಷಗಳು
ಅದಾನಿ ಗ್ರೂಪ್ ವಿರುದ್ಧ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿರುವ ಆರೋಪದ ಬಗ್ಗೆ ಜಂಟಿ ಸದನ ಸಮಿತಿ(ಜೆಪಿಸಿ) ತನಿಖೆಗೆ ಒತ್ತಾಯಿಸಿರುವ ಪ್ರತಿಪಕ್ಷಗಳು, ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ...
Published: 03rd February 2023 03:08 PM | Last Updated: 03rd February 2023 04:46 PM | A+A A-

ವಿಪಕ್ಷಗಳ ಸಭೆಯಲ್ಲಿ ಖರ್ಗೆ ಮತ್ತಿತರರು
ನವದೆಹಲಿ: ಅದಾನಿ ಗ್ರೂಪ್ ವಿರುದ್ಧ ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ಹಿಂಡೆನ್‌ಬರ್ಗ್ ಮಾಡಿರುವ ಆರೋಪದ ಬಗ್ಗೆ ಜಂಟಿ ಸದನ ಸಮಿತಿ(ಜೆಪಿಸಿ) ತನಿಖೆಗೆ ಒತ್ತಾಯಿಸಿರುವ ಪ್ರತಿಪಕ್ಷಗಳು, ಶತಮಾನದ ಅತಿ ದೊಡ್ಡ ಭ್ರಷ್ಟಾಚಾರ ಎಂದು ಶುಕ್ರವಾರ ಆರೋಪಿಸಿವೆ.
ಇಂದು ಅಧಿವೇಶನ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಮತ್ತು ಡಿಎಂಕೆ ಸದಸ್ಯರು ಸದನದ ಬಾವಿಗಿಳಿದ ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಉಭಯ ಸದನಗಳನ್ನು ಮುಂದೂಡಲಾಗಿದೆ.
ಸದನ ಮುಂದೂಡಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ಪ್ರತಿಪಕ್ಷಗಳ ಸಂಸದರು, ಅದಾನಿ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರಮೋದ್ ತಿವಾರಿ ಮಾತನಾಡಿ, ಅದಾನಿ ಹಗರಣ "ಶತಮಾನದ ಅತಿದೊಡ್ಡ ಭ್ರಷ್ಟಾಚಾರವಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ ಸಹ ಭಾಗಿಯಾಗಿದೆ" ಎಂದು ಆರೋಪಿಸಿದರು.
ಶತಮಾನದ ದೊಡ್ಡ ಹಗರಣದ ವಿರುದ್ಧ ನಾವು ನಿಯಮ 267 ರ ಅಡಿಯಲ್ಲಿ ನೋಟಿಸ್ ನೀಡಿದ್ದೇವೆ. ನಾವು ಜೆಪಿಸಿ ಅಥವಾ ಸಿಜೆಐ ಅಡಿಯಲ್ಲಿ ತನಿಖೆಗೆ ಒತ್ತಾಯಿಸುತ್ತೇವೆ. ಲಕ್ಷಾಂತರ ರೂಪಾಯಿ ಹಿಂಪಡೆಯುವಾಗ ಇಡಿ, ಆದಾಯ ತೆರಿಗೆ ಇಲಾಖೆ ಎಲ್ಲಿತ್ತು? ಇದು ಅತಿದೊಡ್ಡ ಭ್ರಷ್ಟಾಚಾರವಾಗಿದ್ದು, ಸರ್ಕಾರದ ಕಣ್ಗಾವಲಿನಲ್ಲೇ ಈ ಹಗರಣ ನಡೆದಿದೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಅದಾನಿ ವಿಚಾರವಾಗಿ ಗದ್ದಲ; ಲೋಕಸಭೆ, ರಾಜ್ಯಸಭೆ ಮಧ್ಯಾಹ್ನಕ್ಕೆ ಮುಂದೂಡಿಕೆ
"ನಾವು ಈ ವಿಷಯದ ಬಗ್ಗೆ ತನಿಖೆಗೆ ಒತ್ತಾಯಿಸುತ್ತೇವೆ. ಸರ್ಕಾರದ ನೀತಿಗಳು, ಅವರ ಸ್ನೇಹಿತರಿಗೆ ಲಾಭಕ್ಕಾಗಿ ಮಾತ್ರ ಇವೆ ಎಂದು ನಾವು ಯಾವಾಗಲೂ ಹೇಳುತ್ತಿದ್ದೇವೆ. ಈಗ ಅದು ಸಾಬೀತಾಗಿದೆ" ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.
''ದೇಶದ ಆರ್ಥಿಕತೆ ಕುಸಿದಿದೆ. ಬ್ಯಾಂಕ್‌ನಿಂದ ಹಣ ಡ್ರಾ ಮಾಡಬೇಕೆಂದರೂ ಹಣ ಇಲ್ಲ ಎಂದು ಜನ ಕಂಗಾಲಾಗಿದ್ದಾರೆ. ಪ್ರತಿಪಕ್ಷಗಳು ಈ ಬಗ್ಗೆ ತನಿಖೆಗೆ ಆಗ್ರಹಿಸುತ್ತಿವೆ. ಆದರೆ ಸರ್ಕಾರ ತನಿಖೆ ಮಾಡಲು ಸಿದ್ಧವಿಲ್ಲ" ಎಂದು ಸಮಾಜವಾದಿ ಪಕ್ಷದ ಸಂದ ರಾಮಗೋಪಾಲ್ ಯಾದವ್ ಅವರು ಹೇಳಿದ್ದಾರೆ.