ದೇವರ ಪಾಲಿಗೆ ಎಲ್ಲರೂ ಒಂದೇ, ಜಾತಿಗಳನ್ನು ಸೃಷ್ಟಿಸಿರುವುದು ಪುರೋಹಿತರೇ ಹೊರತು ದೇವರಲ್ಲ: ಮೋಹನ್ ಭಾಗವತ್
ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ, ಪುರೋಹಿತರಿಂದ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಈ ಮೂಲಕ ದೇಶದಲ್ಲಿರುವ ಜಾತೀಯತೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
Published: 06th February 2023 12:01 PM | Last Updated: 06th February 2023 07:02 PM | A+A A-

ಮೋಹನ್ ಭಾಗವತ್
ಮುಂಬಯಿ: ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ, ಪುರೋಹಿತರಿಂದ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಈ ಮೂಲಕ ದೇಶದಲ್ಲಿರುವ ಜಾತೀಯತೆಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಸತ್ಯವೇ ದೇವರು. ಹೆಸರು, ಸಾಮರ್ಥ್ಯ ಮತ್ತು ಗೌರವ ಏನೇ ಇರಲಿ, ಇಲ್ಲಿ ಎಲ್ಲರೂ ಒಂದೇ ಮತ್ತು ಯಾರ ನಡುವೆಯೂ ಯಾವುದೇ ವ್ಯತ್ಯಾಸಗಳಿಲ್ಲ, ಶಾಸ್ತ್ರದ ಆಧಾರದ ಮೇಲೆ ಕೆಲವು ಪಂಡಿತರು ಹೇಳುವುದು ಸುಳ್ಳು. ಜಾತಿ ಶ್ರೇಷ್ಠತೆಯ ಭ್ರಮೆಯಿಂದ ನಾವು ದಾರಿ ತಪ್ಪುತ್ತಿದ್ದು, ಈ ಭ್ರಮೆಯಿಂದ ಹೊರಬರಬೇಕಿದೆ ಎಂದು ಮೋಹನ್ ಭಾಗವತ್ ಕರೆ ನೀಡಿದರು.
ದೇಶದಲ್ಲಿ ಆತ್ಮಸಾಕ್ಷಿ ಮತ್ತು ಪ್ರಜ್ಞೆ ಒಂದೇ ಆಗಿದ್ದು, ಅಭಿಪ್ರಾಯಗಳು ಮಾತ್ರ ಭಿನ್ನವಾಗಿವೆ ಎಂದ ಅವರು, ತುಳಸಿದಾಸ್, ಕಬೀರ್ ಮತ್ತು ಸೂರದಾಸ್ ಅವರಿಗಿಂತ ಸಂತ ರೋಹಿದಾಸ್ ಅವರು ಮೇಲಿದ್ದರು. ಆದ್ದರಿಂದ ಅವರನ್ನು ಸಂತ ಶಿರೋಮಣಿ ಎಂದು ಪರಿಗಣಿಸಲಾಗಿದೆ. ಶಾಸ್ತ್ರದ ಮೂಲಕ ಬ್ರಾಹ್ಮಣರನ್ನು ಗೆಲ್ಲಲು ಸಾಧ್ಯವಾಗದಿದ್ದರೂ, ಅನೇಕ ಹೃದಯಗಳನ್ನು ರೋಹಿದಾಸ್ ತಲುಪಿದ್ದರು, ದೇವರನ್ನು ನಂಬುವಂತೆ ಮಾಡಿದ್ದರು ಎಂದರು.
ಧರ್ಮವೆಂದರೆ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ ಎಂದು ಸಂತ ರೋಹಿದಾಸರು ಹೇಳಿದ್ದರು. ನಿಮ್ಮ ಧರ್ಮಕ್ಕೆ ಅನುಗುಣವಾಗಿ ನಿಮ್ಮ ಕೆಲಸವನ್ನು ಮಾಡಿ. ಅದರಿಂದ ಸಮಾಜವನ್ನು ಒಗ್ಗೂಡಿಸಿ ಮತ್ತು ಅದರ ಪ್ರಗತಿಗೆ ಕೆಲಸ ಮಾಡಿ. ಇಂತಹ ಚಿಂತನೆಗಳು ಮತ್ತು ಉನ್ನತ ಆದರ್ಶಗಳಿಂದ ಅನೇಕ ದೊಡ್ಡ ದೊಡ್ಡ ವ್ಯಕ್ತಿಗಳು ಸಂತ ರೋಹಿದಾಸರ ಶಿಷ್ಯರಾದರು ಎಂದು ಮೋಹನ್ ಭಾಗವತ್ ಹೇಳಿದರು.
ಇದನ್ನೂ ಓದಿ: ಉದ್ಯೋಗದ ಹಿಂದೆ ಓಡಬೇಡಿ ಎಂದ ಮೋಹನ್ ಭಾಗವತ್; ಮೋದಿಯವರ 2 ಕೋಟಿ ಉದ್ಯೋಗ ಭರವಸೆ ಏನು ಎಂದ ಕಪಿಲ್ ಸಿಬಲ್
ದೇವರ ಮುಂದೆ ಎಲ್ಲರೂ ಸಮಾನರು. ಆತನ ಮುಂದೆ ಜಾತಿ, ಪಂಗಡ ಎಂಬುದೆಲ್ಲಾ ಇಲ್ಲ. ಇದು ಸೃಷ್ಟಿಯಾಗಿದ್ದು ಧರ್ಮ ಗುರುಗಳಿಂದ. ಇದು ತಪ್ಪು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಕಾರ್ಮಿಕರ ಕೆಲಸದ ಬಗ್ಗೆ ಗೌರವ ಇಲ್ಲದಿರುವುದೇ ದೇಶದಲ್ಲಿ ನಿರುದ್ಯೋಗ ಸಮಸ್ಯೆಗೆ ಕಾರಣ. ಎಲ್ಲಾ ಕೆಲಸಗಳನ್ನೂ ಗೌರವಿಸುವ ಕೆಲಸ ಆಗಬೇಕು. ಒಟ್ಟಾರೆ ಉದ್ಯೋಗದಲ್ಲಿ ಶೇ.10ರಷ್ಟು ಮಾತ್ರವೇ ಸರ್ಕಾರಿ ಉದ್ಯೋಗ, ಉಳಿದ ಉದ್ಯೋಗದ ಪಾಲು ಶೇ. 20. ವಿಶ್ವದ ಯಾವುದೇ ದೇಶ ಶೇ. 30ಕ್ಕಿಂತ ಹೆಚ್ಚಿನ ಉದ್ಯೋಗ ನೀಡುವುದು ಸಾಧ್ಯವಿಲ್ಲ. ಹೀಗಾಗಿ ಜನರು ಉದ್ಯೋಗದ ಹಿಂದೆ ಓಡುವುದು ಬಿಡಬೇಕು ಎಂದು ಹೇಳಿದ್ದಾರೆ.
ಕಾಶಿಯಲ್ಲಿ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ಔರಂಗಜೇಬ್‌ಗೆ ಛತ್ರಪತಿ ಶಿವಾಜಿ ಮಹಾರಾಜರು ಪತ್ರ ಬರೆದರು. ಹಿಂದೂಗಳು ಮತ್ತು ಮುಸ್ಲಿಮರು ಒಂದೇ ದೇವರ ಮಕ್ಕಳು ಮತ್ತು ಅವರಲ್ಲಿ ಒಬ್ಬರ ಮೇಲೆ ಮಾಡುವ ಕ್ರೌರ್ಯವು ತಪ್ಪಾಗಿದೆ ಮತ್ತು ಪ್ರತಿಯೊಬ್ಬರನ್ನು ಗೌರವಿಸುವುದು ಅವರ ಕೆಲಸ, ಅದನ್ನು ನಿಲ್ಲಿಸದಿದ್ದರೆ ಅವರು ತಮ್ಮ ಕತ್ತಿಯನ್ನು ಬಳಸುತ್ತಾರೆ ಎಂದು ಬರೆದಿದ್ದಾಗಿ ಮೋಹನ್ ಭಾಗವತ್ ಹೇಳಿದ್ದಾರೆ.