ಪಶ್ಚಿಮ ಬಂಗಾಳ: ಬಿರ್ಭೂಮ್‌ನಲ್ಲಿ ಬಾಂಬ್ ಸ್ಫೋಟ, ಇಬ್ಬರು ಟಿಎಂಸಿ ಕಾರ್ಯಕರ್ತರು ಸಾವು

ಪಂಚಾಯತ್ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯಲ್ಲಿ ಮೋಟಾರ್ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಾಂಬ್ ಎಸೆದಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ...
ಲಾಲ್ತು ಶೇಖ್ ನಿವಾಸದ ಬಳಿ ಪೊಲೀಸ್ ಸಿಬ್ಬಂದಿ
ಲಾಲ್ತು ಶೇಖ್ ನಿವಾಸದ ಬಳಿ ಪೊಲೀಸ್ ಸಿಬ್ಬಂದಿ

ಕೋಲ್ಕತ್ತಾ: ಪಂಚಾಯತ್ ಚುನಾವಣೆಗೂ ಮುನ್ನ ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯಲ್ಲಿ ಮೋಟಾರ್ ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಾಂಬ್ ಎಸೆದಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಪ್ರತಿಪಕ್ಷ ಬಿಜೆಪಿ ಮತ್ತು ಕಾಂಗ್ರೆಸ್, ಈ ಹತ್ಯೆಗಳು ಟಿಎಂಸಿಯ ಆಂತರಿಕ ಕಲಹದ ಪರಿಣಾಮ ಎಂದು ಆರೋಪಿಸಿದರೆ, ಆಡಳಿತ ಪಕ್ಷ, ದೇಶದ ಅತ್ಯಂತ ಹಳೆಯ ಪಕ್ಷದತ್ತ ಬೆರಳು ತೋರಿಸಿದೆ.

ಘಟನೆ ನಡೆದ 24 ಗಂಟೆಯೊಳಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದ್ದು, ಈ ಕ್ರಮಕ್ಕೂ ಹತ್ಯೆಗೂ ಸಂಬಂಧವಿಲ್ಲ ಎಂದು ಸರ್ಕಾರ ಹೇಳಿದೆ.

ಟಿಎಂಸಿ ಕಾರ್ಯಕರ್ತರಾದ ನ್ಯೂಟನ್ ಶೇಖ್ ಮತ್ತು ಅವರ ಸಹಚರ ಸ್ಥಳೀಯ ಪಂಚಾಯತ್ ಮುಖ್ಯಸ್ಥರ ಸಹೋದರ ಲಾಲ್ತು ಶೇಖ್ ಇಬ್ಬರೂ ಬೈಕ್ ನಲ್ಲಿ ಹೋಗುತ್ತಿದ್ದಾಗ ಶನಿವಾರ ಸಂಜೆ ಕೆಲವು ದುಷ್ಕರ್ಮಿಗಳು ಅವರ ಮೇಲೆ ಬಾಂಬ್ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವರ್ಷ ನಡೆಯಲಿರುವ ಪಂಚಾಯತಿ ಚುನಾವಣೆಗೂ ಮುನ್ನ, ಈ ಪ್ರದೇಶದಲ್ಲಿ ಈ ಇಬ್ಬರ ಜನಪ್ರಿಯತೆ ಹೆಚ್ಚುತ್ತಿದೆ ಎಂಬ ಭಯದಿಂದ ಕಾಂಗ್ರೆಸ್‌ನ ಗೂಂಡಾಗಳು ಬಾಂಬ್ ಎಸೆದಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ಸಂಬಂಧಿಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಅವರು, ಅಂತಹ ದಾಳಿ ನಡೆಸಲು ಸಾಧ್ಯವೇ ಇಲ್ಲ. ಮಾರ್ಗಗ್ರಾಮ್‌ನಲ್ಲಿ ನಮ್ಮ ಪಕ್ಷವು ಕಡಿಮೆ ಅಸ್ತಿತ್ವ ಹೊಂದಿದೆ ಎಂದು ಹೇಳಿದ್ದಾರೆ.

"ದಾಳಿಕೋರರು ಮತ್ತು ಬಲಿಪಶುಗಳು ಇಬ್ಬರೂ ಟಿಎಂಸಿಗೆ ಸೇರಿದವರು ಎಂಬುದು ಎಲ್ಲರಿಗೂ ತಿಳಿದಿದೆ" ಎಂದು ಚೌಧರಿ ತಿರುಗೇಟು ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಮಾತನಾಡಿ, ‘ಹಣವನ್ನು ಕೊಳ್ಳೆ ಹೊಡೆಯುವ ಹೋರಾಟದಲ್ಲಿ ಟಿಎಂಸಿ ಕಾರ್ಯಕರ್ತರು ಪರಸ್ಪರ ತಮ್ಮ ಮೇಲೆಯೇ ದಾಳಿ ನಡೆಸಿ ಸಾಯುತ್ತಿದ್ದಾರೆ. ಈ ಸರ್ಕಾರವನ್ನು ತೆಗೆದುಹಾಕಿದ ನಂತರವೇ ಪರಿಸ್ಥಿತಿ ಸರಿ ಹೋಗಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com