15 ವರ್ಷಗಳ ಹಿಂದಿನ ಪ್ರಕರಣ: ಯುಪಿ ವಿಧಾನಸಭೆಯಿಂದ ಎಸ್‌ಪಿ ಶಾಸಕ ಅಬ್ದುಲ್ಲಾ ಅಜಂ ಖಾನ್ ಅನರ್ಹ

ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯ ಸ್ವರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ(ಎಸ್‌ಪಿ) ಶಾಸಕ ಅಬ್ದುಲ್ಲಾ ಅಜಮ್ ಖಾನ್ ಅವರನ್ನು ರಾಜ್ಯ ವಿಧಾನಸಭೆಯ ಸದಸ್ಯತ್ವದಿಂದ ಬುಧವಾರ ಅನರ್ಹಗೊಳಿಸಲಾಗಿದೆ. 
ಅಜಂ ಖಾನ್ ಪುತ್ರ ಅಬ್ದುಲ್ಲಾ ಖಾನ್
ಅಜಂ ಖಾನ್ ಪುತ್ರ ಅಬ್ದುಲ್ಲಾ ಖಾನ್

ಲಖನೌ: ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯ ಸ್ವರ್ ಕ್ಷೇತ್ರದಿಂದ ಸಮಾಜವಾದಿ ಪಕ್ಷದ(ಎಸ್‌ಪಿ) ಶಾಸಕ ಅಬ್ದುಲ್ಲಾ ಅಜಮ್ ಖಾನ್ ಅವರನ್ನು ರಾಜ್ಯ ವಿಧಾನಸಭೆಯ ಸದಸ್ಯತ್ವದಿಂದ ಬುಧವಾರ ಅನರ್ಹಗೊಳಿಸಲಾಗಿದೆ. 

ಅಬ್ದುಲ್ಲಾ ಅವರು ಹಿರಿಯ ಎಸ್‌ಪಿ ನಾಯಕ ಅಜಂ ಖಾನ್ ಅವರ ಪುತ್ರರಾಗಿದ್ದು, ಅಬ್ದುಲ್ಲಾ ಅವರನ್ನು ಅನರ್ಹಗೊಳಿಸಿರುವುದು ಇದು ಎರಡನೇ ಬಾರಿ. ಹಿರಿಯ ವಿಧಾನಸಭೆ ಅಧಿಕಾರಿಯೊಬ್ಬರು, 15 ವರ್ಷಗಳ ಹಿಂದಿನ ಪ್ರಕರಣದಲ್ಲಿ ಮೊರಾದಾಬಾದ್ ನ್ಯಾಯಾಲಯವು ಎರಡು ವರ್ಷಗಳ ಶಿಕ್ಷೆಗೆ ಗುರಿಯಾದ ನಂತರ ಅಬ್ದುಲ್ಲಾ ಅಜಮ್ ಅವರನ್ನು ವಿಧಾನಸಭೆ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. ಅವರ ಸ್ಥಾನವನ್ನು ಕಳೆದ ಫೆಬ್ರವರಿ 13ರಿಂದ ಖಾಲಿ ಎಂದು ಪರಿಗಣಿಸಲಾಗುವುದು ಎಂದರು.

ಪ್ರಜಾಪ್ರತಿನಿಧಿ ಕಾಯ್ದೆಯಡಿ ಒಬ್ಬ ಸಾರ್ವಜನಿಕ ಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆ ವಿಧಿಸಿದರೆ, ತಕ್ಷಣವೇ ಶಾಸಕಾಂಗ ಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಲಾಗುತ್ತದೆ ಮತ್ತು ಶಿಕ್ಷೆಯನ್ನು ಅನುಭವಿಸಿದ ನಂತರ ಇನ್ನೂ ಆರು ವರ್ಷಗಳವರೆಗೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ.

2008ರಲ್ಲಿ ಅಕ್ರಮ ಪಿಕೆಟಿಂಗ್ ಪ್ರಕರಣದಲ್ಲಿ ಮೊರಾದಾಬಾದ್‌ನ ನ್ಯಾಯಾಲಯವು ಅಜಂ ಖಾನ್ ಮತ್ತು ಅಬ್ದುಲ್ಲಾ ಅವರಿಗೆ ತಲಾ ಎರಡು ವರ್ಷಗಳ ಶಿಕ್ಷೆಯನ್ನು ಸೋಮವಾರ ವಿಧಿಸಿತ್ತು. ಆದರೆ, ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರು ಮಾಡಿತ್ತು.

ಅಬ್ದುಲ್ಲಾ ಅಜಂ ಎರಡನೇ ಬಾರಿಗೆ ಅನರ್ಹ
ಅಬ್ದುಲ್ಲಾ ಅವರನ್ನು ಎರಡನೇ ಬಾರಿಗೆ ಸದನದ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿದೆ. 2020ರಲ್ಲಿ ಅಲಹಾಬಾದ್ ಹೈಕೋರ್ಟ್ ಅವರ ಚುನಾವಣೆಯನ್ನು ರದ್ದುಗೊಳಿಸಿತು. 2017ರ ವಿಧಾನಸಭಾ ಚುನಾವಣೆಯಲ್ಲಿ ಸ್ವರ್ ಸ್ಥಾನವನ್ನು ಗೆದ್ದ ಅಬ್ದುಲ್ಲಾ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಕನಿಷ್ಠ 25 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂದು ನ್ಯಾಯಾಲಯ ಹೇಳಿತ್ತು.

2019ರ ಲೋಕಸಭೆ ಚುನಾವಣೆಯಲ್ಲಿ ದ್ವೇಷಪೂರಿತ ಭಾಷಣಕ್ಕಾಗಿ ರಾಂಪುರ ನ್ಯಾಯಾಲಯವು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಬ್ದುಲ್ಲಾ ಅವರ ತಂದೆ ಮತ್ತು ರಾಮ್‌ಪುರ ಸದರ್ ಕ್ಷೇತ್ರದ ಎಸ್‌ಪಿ ಶಾಸಕ ಅಜಂ ಖಾನ್‌ಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು, ನಂತರ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com