ಶಿಂಧೆ ಬಣಕ್ಕೆ 'ಬಿಲ್ಲು ಬಾಣ' ಚಿಹ್ನೆ: ಇಸಿ ನಿರ್ಧಾರ ಪ್ರಜಾಪ್ರಭುತ್ವದ ಕಗ್ಗೊಲೆ ಎಂದ ಸಂಜಯ್ ರಾವತ್
ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ.
Published: 17th February 2023 08:36 PM | Last Updated: 17th February 2023 08:36 PM | A+A A-

ಸಂಜಯ್ ರಾವತ್
ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಶಿವಸೇನೆಯ ಮೂಲ ಚಿಹ್ನೆಯಾದ 'ಬಿಲ್ಲು ಬಾಣ'ವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣಕ್ಕೆ ನೀಡುವ ಮೂಲಕ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿದೆ.
ಚುನಾವಣಾ ಆಯೋಗದ ನಿರ್ಧಾರಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಿವಸೇನೆ-ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ನಾಯಕ ಸಂಜಯ್ ರಾವತ್ ಅವರು, ಇದು "ಪ್ರಜಾಪ್ರಭುತ್ವದ ಕಗ್ಗೊಲೆ" ಎಂದು ಹೇಳಿದ್ದಾರೆ.
ನಮ್ಮ ಪಕ್ಷ ಜನರ ಬಳಿಗೆ ಹೋಗಲಿದೆ. ಚುನಾವಣಾ ಆಯೋಗದ ಈ ನಿರ್ಧಾರ ನಿರೀಕ್ಷಿತ ಮತ್ತು ಆಯೋಗದ ಮೇಲೆ ನಂಬಿಕೆ ಇರಲಿಲ್ಲ ಎಂದು ರಾವತ್ ಹೇಳಿದ್ದಾರೆ.
ಇದನ್ನು ಓದಿ: ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆಯ 'ಬಿಲ್ಲು ಬಾಣ' ಚಿಹ್ನೆ; ಉದ್ಧವ್ ಠಾಕ್ರೆಗೆ ತೀವ್ರ ಮುಖಭಂಗ
ಇನ್ನು ಚುನಾವಣಾ ಆಯೋಗದ ಆದೇಶವನ್ನು ಸ್ವಾಗತಿಸಿದ ಏಕನಾಥ್ ಶಿಂಧೆ ಅವರು, ಇದು ಬಾಳಾಸಾಹೇಬ್ ಠಾಕ್ರೆ ಸಿದ್ಧಾಂತಕ್ಕೆ ಸಿಕ್ಕ ಗೆಲುವು ಎಂದು ಬಣ್ಣಿಸಿದ್ದಾರೆ.
"ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ. ಪ್ರಜಾಪ್ರಭುತ್ವದಲ್ಲಿ ಬಹುಮತವೇ ಮುಖ್ಯ" ಎಂದು ಶಿಂಧೆ ಹೇಳಿದ್ದಾರೆ.
"ಇದು ಬಾಳಾಸಾಹೇಬರ ಪರಂಪರೆಯ ವಿಜಯವಾಗಿದೆ. ನಮ್ಮದು ನಿಜವಾದ ಶಿವಸೇನೆ. ನಾವು ಕಳೆದ ವರ್ಷ ಮಹಾರಾಷ್ಟ್ರದಲ್ಲಿ(ಬಿಜೆಪಿಯೊಂದಿಗೆ) ಬಾಳಾಸಾಹೇಬರ ಚಿಂತನೆಗಳನ್ನು ಇಟ್ಟುಕೊಂಡು ಸರ್ಕಾರ ರಚಿಸಿದ್ದೇವೆ" ಎಂದು ಶಿಂಧೆ ತಿಳಿಸಿದ್ದಾರೆ.