ಈರುಳ್ಳಿ ಬೆಲೆ ತೀವ್ರ ಕುಸಿತ: 512 ಕೆಜಿ ಈರುಳ್ಳಿ ಮಾರಾಟದಿಂದ ರೈತನಿಗೆ ಸಿಕ್ಕಿದ್ದು ಕೇವಲ 2.49 ರೂ.!

ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿತ ಕಂಡಿದ್ದು, ಸೊಲ್ಲಾಪುರದ ರೈತರೊಬ್ಬರು ತಮ್ಮ 512 ಕೆಜಿ ಈರುಳ್ಳಿಯನ್ನು ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ ಕೇವಲ 2.49 ರೂ. ಲಾಭ ಗಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸೊಲ್ಲಾಪುರ: ಮಹಾರಾಷ್ಟ್ರದಲ್ಲಿ ಈರುಳ್ಳಿ ಬೆಲೆ ತೀವ್ರ ಕುಸಿತ ಕಂಡಿದ್ದು, ಸೊಲ್ಲಾಪುರದ ರೈತರೊಬ್ಬರು ತಮ್ಮ 512 ಕೆಜಿ ಈರುಳ್ಳಿಯನ್ನು ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಿ ಕೇವಲ 2.49 ರೂ. ಲಾಭ ಗಳಿಸಿದ್ದಾರೆ.

ಸೊಲ್ಲಾಪುರದ ಬಾರ್ಶಿ ತಹಸಿಲ್‌ನಲ್ಲಿ ವಾಸವಾಗಿರುವ 63 ವರ್ಷದ ರಾಜೇಂದ್ರ ಚವ್ಹಾಣ ಎಂಬ ರೈತ ಸೊಲ್ಲಾಪುರ ಮಾರುಕಟ್ಟೆ ಎಪಿಎಂಸಿ ಯಾರ್ಡ್‌ನಲ್ಲಿ ಈರುಳ್ಳಿಯನ್ನು ಪ್ರತಿ ಕೆಜಿಗೆ 1 ರೂಪಾಯಿಗೆ ಮಾರಾಟ ಮಾಡಿದ್ದು, ಒಟ್ಟು 512 ಕೆಜಿಗೆ 512 ರೂಪಾಯಿ ಸಿಕ್ಕಿದೆ.

ಬಳಿಕ ಪಿಟಿಐ ಜೊತೆ ಮಾತನಾಡಿದ ಚವ್ಹಾಣ್, "ನಾನು ಐದು ಕ್ವಿಂಟಾಲ್‌ಗಿಂತ ಹೆಚ್ಚು ತೂಕದ 10 ಚೀಲ ಈರುಳ್ಳಿಯನ್ನು ಸೋಲಾಪುರದ ಈರುಳ್ಳಿ ವ್ಯಾಪಾರಿಗೆ ಮಾರಾಟ ಮಾಡಿದ್ದು, ಲೋಡಿಂಗ್, ಸಾರಿಗೆ, ಕಾರ್ಮಿಕ ಮತ್ತು ಇತರ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ನನಗೆ ಕೇವಲ 2.49 ರೂಪಾಯಿ ಸಿಕ್ಕಿದೆ" ಎಂದಿದ್ದಾರೆ.

ವ್ಯಾಪಾರಿ ನನಗೆ 1 ಕ್ವಿಂಟಲ್‌ಗೆ 100 ರೂ. ದರ ನೀಡಿದರು. ಒಟ್ಟಾರೆ  512 ಕೆಜಿ ಈರುಳ್ಳಿ ಇದ್ದು, ಅದಕ್ಕೆ ಒಟ್ಟು 512 ರೂ. ಬಂದಿದೆ. 

"ಲೋಡಿಂಗ್, ಕೂಲಿ, ಸಾಗಣೆ ಮತ್ತು ಇತರ ಶುಲ್ಕವಾಗಿ 509.51 ರೂಪಾಯಿ ಕಡಿತಗೊಳಿಸಿ ನನಗೆ 2.49 ಬಂದಿದೆ. ಇದು ನನಗೆ ಮತ್ತು ರಾಜ್ಯದ ಇತರ ಈರುಳ್ಳಿ ಬೆಳೆಗಾರರಿಗೆ ಮಾಡಿದ ಅವಮಾನ. ಅಂತಹ ಆದಾಯ ಬಂದರೆ ನಾವು ಹೇಗೆ ಬದುಕುತ್ತೇವೆ?" ಎಂದು ರೈತ ಪ್ರಶ್ನಿಸಿದ್ದಾರೆ.

ರೈತರ ಈರುಳ್ಳಿಗೆ ಉತ್ತಮ ಬೆಲೆ ಸಿಗಬೇಕು ಮತ್ತು ಹಾನಿಗೊಳಗಾದ ರೈತರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ರೈತರ ಚವ್ಹಾಣ್ ಒತ್ತಾಯಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಇತರ ಎಲ್ಲಾ ಈರುಳ್ಳಿ ಉತ್ಪಾದಿಸುವ ರಾಜ್ಯಗಳು ಈರುಳ್ಳಿಯ ಬಂಪರ್ ಬೆಳೆಯನ್ನು ಕಂಡಿವೆ, ಇದರ ಪರಿಣಾಮವಾಗಿ ಈರುಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ. ಅನೇಕ ರೈತರು ರಾಜ್ಯಾದ್ಯಂತ ಈರುಳ್ಳಿ ಮಾರಾಟದಿಂದ ತಮ್ಮ ಉತ್ಪಾದನಾ ವೆಚ್ಚವನ್ನು ಸಹ ಪಡೆಯುತ್ತಿಲ್ಲ. ದೇಶದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾಗಿರುವ ನಾಸಿಕ್‌ನ ಲಾಸಲ್‌ಗಾಂವ್ ಎಪಿಎಂಸಿಯಲ್ಲಿ ಕಳೆದ ಎರಡು ತಿಂಗಳಲ್ಲಿ ಸಗಟು ಈರುಳ್ಳಿ ಬೆಲೆ ಸುಮಾರು ಶೇ.70ರಷ್ಟು ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com