ಪಕ್ಷಾಂತರ ನಿಷೇಧ ಕಾಯ್ದೆ ಜಾರಿ, ಪ್ರತಿಪಕ್ಷಗಳ ಮೈತ್ರಿ, ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ಕಾಂಗ್ರೆಸ್ ನಿರ್ಣಯ

ಸಾಮೂಹಿಕ ಪಕ್ಷಾಂತರ ತಡೆಯಲು ಮತ್ತು ಶಾಸಕರ ಖರೀದಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದಾಗಿ ಮತ್ತು ಪ್ರತಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸರ್ವಸದಸ್ಯರ...
ಕಾಂಗ್ರೆಸ್ ಸರ್ವಸದಸ್ಯರ ಮಹಾಧಿವೇಶನ
ಕಾಂಗ್ರೆಸ್ ಸರ್ವಸದಸ್ಯರ ಮಹಾಧಿವೇಶನ
Updated on

ರಾಯ್‌ಪುರ: ಸಾಮೂಹಿಕ ಪಕ್ಷಾಂತರ ತಡೆಯಲು ಮತ್ತು ಶಾಸಕರ ಖರೀದಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದಾಗಿ ಮತ್ತು ಪ್ರತಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸರ್ವಸದಸ್ಯರ ಮಹಾಧಿವೇಶನದಲ್ಲಿ ಕಾಂಗ್ರೆಸ್ ನಿರ್ಣಯ ಅಂಗೀಕರಿಸಿದೆ.

ರಾಯ್‌ಪುರದಲ್ಲಿ ನಡೆಯುತ್ತಿರುವ ಮಹಾಧಿವೇಶನದ ಎರಡನೇ ದಿನವಾದ ಶನಿವಾರ ಕಾಂಗ್ರೆಸ್ ಈ ನಿರ್ಣಯ   ಅಂಗೀಕರಿಸಿದ್ದು, ತನ್ನ ರಾಜಕೀಯ ನಿರ್ಣಯದಲ್ಲಿ ಆರ್ಥಿಕ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಕುರಿತು ನಿರ್ಣಯಗಳನ್ನು ಅಂಗೀಕರಿಸಿದೆ.

"2014 ರಿಂದ, ಬಿಜೆಪಿಯು ಸಾಮೂಹಿಕ ಪಕ್ಷಾಂತರಗಳನ್ನು ರೂಪಿಸಿದೆ, ಶಾಸಕರನ್ನು ಖರೀದಿಸಿದೆ ಮತ್ತು ಆ ಮೂಲಕ ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರ್ಕಾರವನ್ನು ಉರುಳಿಸಿದೆ. ಅಂತಹ ಪದ್ಧತಿಗಳನ್ನು ತೊಡೆದುಹಾಕಲು ಕಾಂಗ್ರೆಸ್ ಸಂವಿಧಾನ ತಿದ್ದುಪಡಿ ಮಾಡಲಿದೆ" ಎಂದು ಕರಡು ನಿರ್ಣಯ ಹೇಳಿದೆ.

ಇದಲ್ಲದೆ, ಪೊಲೀಸ್ ಸುಧಾರಣೆಗಳು ಮತ್ತು ದ್ವೇಷದ ಅಪರಾಧಗಳನ್ನು ತಡೆಗಟ್ಟಲು ಮತ್ತು ಶಿಕ್ಷಿಸಲು ಹೊಸ ಕಾನೂನು ಸೇರಿದಂತೆ ಕಾಂಗ್ರೆಸ್ ಒಟ್ಟು 56 ಅಂಶಗಳ ರಾಜಕೀಯ ನಿರ್ಣಯ ಕೈಗೊಂಡಿದೆ.

ದೋಷಪೂರಿತ ಚುನಾವಣಾ ಬಾಂಡ್ ಬದಲಿಗೆ ರಾಷ್ಟ್ರೀಯ ಚುನಾವಣಾ ನಿಧಿಯನ್ನು ಸ್ಥಾಪಿಸಲಾಗುವುದು ಎಂದು ಕಾಂಗ್ರೆಸ್ ಹೇಳಿದೆ. 

ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಪೂರ್ಣ ರಾಜ್ಯತ್ವವನ್ನು ಮರುಸ್ಥಾಪಿಸುವುದಾಗಿ ಸಹ ಕಾಂಗ್ರೆಸ್ ನಿರ್ಣಯ ಭರವಸೆ ನೀಡಿದ್ದರೂ, 370ನೇ ವಿಧಿಯ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ. ಆದರೆ "ಇಡೀ ಜಮ್ಮು ಮತ್ತು ಕಾಶ್ಮೀರ ಭಾರತದ ಭಾಗವಾಗಿದೆ ಎಂದು ಕಾಂಗ್ರೆಸ್ ಪುನರುಚ್ಚರಿಸಿದೆ."

ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೆಚ್ಚಿನ ನಿರೀಕ್ಷೆ ಇದೆ. ಯಾವುದೇ ತೃತೀಯ ರಂಗ ರಚನೆಯೂ ಬಿಜೆಪಿ/ಎನ್‌ಡಿಎಗೆ ಲಾಭವಾಗಲಿದೆ ಎಂದು ನಿರ್ಣಯ ಹೇಳಿದೆ.

"ಜಾತ್ಯತೀತ ಮತ್ತು ಸಮಾಜವಾದಿ ಶಕ್ತಿಗಳ ಏಕತೆ ಕಾಂಗ್ರೆಸ್ ಪಕ್ಷದ ಭವಿಷ್ಯದ ಹೆಗ್ಗುರುತಾಗಿದೆ. ಸಮಾನ ಮನಸ್ಕ ಜಾತ್ಯತೀತ ಶಕ್ತಿಗಳನ್ನು ಗುರುತಿಸಲು, ಸಜ್ಜುಗೊಳಿಸಲು ಮತ್ತು ಒಗ್ಗೂಡಿಸಲು ಕಾಂಗ್ರೆಸ್ ಎಲ್ಲ ಪ್ರಯತ್ನಗಳನ್ನು ಮಾಡಬೇಕು. ನಮ್ಮ ಸಿದ್ಧಾಂತವನ್ನು ಒಪ್ಪುವ ಜಾತ್ಯತೀತ ಪ್ರಾದೇಶಿಕ ಶಕ್ತಿಗಳನ್ನು ನಾವು ಸೇರಿಸಿಕೊಳ್ಳಬೇಕು. ಸಾಮಾನ್ಯ ಸೈದ್ಧಾಂತಿಕ ಆಧಾರದ ಮೇಲೆ ಎನ್‌ಡಿಎ ಎದುರಿಸಲು ಒಗ್ಗಟ್ಟಿನ ವಿರೋಧ ತುರ್ತು ಅಗತ್ಯವಿದೆ ” ಎಂದು ಕಾಂಗ್ರೆಸ್ ನಿರ್ಣಯ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com