ಉತ್ತರ ಪ್ರದೇಶದಲ್ಲಿ ಭಾರತ್ ಜೋಡೋ ಯಾತ್ರೆ: ಅಯೋಧ್ಯೆ ರಾಮ ಮಂದಿರದ ಪ್ರಧಾನ ಅರ್ಚಕರಿಂದ ರಾಹುಲ್ ಗಾಂಧಿಗೆ ಪತ್ರ!
ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ರಾಹುಲ್ ಗಾಂಧಿ ಅವರಿಗೆ ಪತ್ರವೊಂದನ್ನು ರವಾನಿಸಿದ್ದಾರೆ.
Published: 03rd January 2023 08:18 AM | Last Updated: 03rd January 2023 06:57 PM | A+A A-

ಸತ್ಯೇಂದ್ರ ದಾಸ್
ಅಯೋಧ್ಯೆ: ಕುತೂಹಲಕಾರಿ ಬೆಳವಣಿಗೆಯೊಂದರಲ್ಲಿ ಅಯೋಧ್ಯೆ ರಾಮ ಜನ್ಮಭೂಮಿ ದೇಗುಲದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್, ರಾಹುಲ್ ಗಾಂಧಿ ಅವರಿಗೆ ಪತ್ರವೊಂದನ್ನು ರವಾನಿಸಿದ್ದು, ತಮ್ಮ ಆಶೀರ್ವಾದ ಸದಾ ನಿಮ್ಮೊಂದಿಗಿರಲಿದೆ ಎಂದು ಹರಸಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯು ಇಂದು ಉತ್ತರ ಪ್ರದೇಶ ತಲುಪಲಿದೆ. ‘ನೀವು ದೇಶಕ್ಕಾಗಿ ಮಾಡುವ ಯಾವುದೇ ಕೆಲಸ ಎಲ್ಲರಿಗೂ ಪ್ರಯೋಜನಕಾರಿ. ನನ್ನ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿದೆ’ ಎಂದು ದಾಸ್ ಅವರು ಪತ್ರದಲ್ಲಿ ಬರೆದಿದ್ದಾರೆ. ಅದನ್ನು ಅವರು ಯುವ ಕಾಂಗ್ರೆಸ್ ಮುಖಂಡ ಗೌರವ್ ತಿವಾರಿ ಮೂಲಕ ಹಸ್ತಾಂತರ ಮಾಡಿದ್ದಾರೆ.
'ರಾಮನ ಆಶೀರ್ವಾದ ನಿಮ್ಮೊಂದಿಗೆ (ರಾಹುಲ್ ಗಾಂಧಿ) ಇರಲಿ‘ ಎಂದೂ ಅವರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಯೋಧ್ಯೆಯ ಹನುಮಾನ್ ಗರ್ಹಿ ದೇಗುಲದ ಅರ್ಚಕ ರಾಜು ದಾಸ್, ’ಇದು ಸತ್ಯೇಂದ್ರ ದಾಸ್ ಅವರ ವೈಯಕ್ತಿಕ ಅಭಿಪ್ರಾಯ.
ಅವರ ಮಾತನ್ನು ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ಯಾವಾಗಲೂ ಹಿಂದೂ ವಿರೋಧಿ’ ಎಂದು ಹೇಳಿದ್ದಾರೆ. 9 ದಿನಗಳ ವಿರಾಮದ ಬಳಿಕ ಭಾರತ್ ಜೋಡೊ ಯಾತ್ರೆಯು ಜ. 3ರಂದು (ಮಂಗಳವಾರ) ಪುನರಾರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಉತ್ತರ ಪ್ರದೇಶವನ್ನು ತಲುಪಲಿದೆ.