ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ: 'ನನಗೆ ಕುಟುಂಬ ಇದೆ ದೂರು ದಾಖಲಿಸಬೇಡಿ ಎಂದು ಬೇಡಿಕೊಂಡಿದ್ದ ಆರೋಪಿ'

ಕಳೆದ ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಸಂತ್ರಸ್ತೆಯ ಬಳಿ ಕ್ಷಮೆಯಾಚಿಸಿದ್ದಾನೆ. ಅಲ್ಲದೆ ತನಗೆ ಕುಟುಂಬ ಇದ್ದು, ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ...
ಏರ್ ಇಂಡಿಯಾ ವಿಮಾನ
ಏರ್ ಇಂಡಿಯಾ ವಿಮಾನ

ನವದೆಹಲಿ: ಕಳೆದ ನವೆಂಬರ್‌ನಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ ಸಂತ್ರಸ್ತೆಯ ಬಳಿ ಕ್ಷಮೆಯಾಚಿಸಿದ್ದಾನೆ. ಅಲ್ಲದೆ ತನಗೆ ಕುಟುಂಬ ಇದ್ದು, ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ. ಹೆಂಡತಿ ಮತ್ತು ಮಗುವಿಗೆ ತೊಂದರೆಯಾಗುತ್ತದೆ ಎಂದು ಬೇಡಿಕೊಂಡಿದ್ದ ಎನ್ನಲಾಗಿದೆ.

ಸಂತ್ರಸ್ತ ಮಹಿಳೆ ಏರ್ ಇಂಡಿಯಾಗೆ ನೀಡಿದ ದೂರಿನ ಆಧಾರದ ಮೇಲೆ ದೆಹಲಿ ಪೊಲೀಸರು ಬುಧವಾರ ಆರೋಪಿಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅದರಲ್ಲಿ ಆರೋಪಿ ತನ್ನ ವಿರುದ್ಧ ಕೇಸ್ ದಾಖಲಿಸಬೇಡಿ ಎಂದು ಬೇಡಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ.

ಎಫ್ಐಆರ್ ಪ್ರಕಾರ, ಮಹಿಳೆ, ತನ್ನ ಇಚ್ಛೆಯ ವಿರುದ್ಧವಾಗಿ ಆರೋಪಿಯ ಜೊತೆ ಮಾತುಕತೆ ನಡೆಸಿ, ರಾಜಿ ಮಾಡಿಕೊಳ್ಳುವಂತೆ ತನಗೆ ಒತ್ತಾಯಿಸಲಾಯಿತು ಎಂದು ಆರೋಪಿಸಿದ್ದಾರೆ.

ನವೆಂಬರ್ 26 ರಂದು AI 102 ಬೋರ್ಡ್‌ನಲ್ಲಿ ಮಧ್ಯಾಹ್ನದ ಊಟ ಬಡಿಸಿದ ನಂತರ ಮತ್ತು ದೀಪಗಳನ್ನು ಆಫ್ ಮಾಡಿದ ಸ್ವಲ್ಪ ಸಮಯದ ನಂತರ, ಬಿಸಿನೆಸ್ ಕ್ಲಾಸ್ ಸೀಟ್ 8A ನಲ್ಲಿ ಕುಳಿತಿದ್ದ ಪುರುಷ ಪ್ರಯಾಣಿಕನು ವಯಸ್ಸಾದ ಮಹಿಳೆಯ ಸೀಟ್ ಬಳಿ ಹೋಗಿ, ತನ್ನ ಪ್ಯಾಂಟ್ ಬಿಚ್ಚಿ ಅವರ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಎಂದು ಎಫ್‌ಐಆರ್ ತಿಳಿಸಿದೆ.

"ಅಲ್ಲಿ ಏನಾಯಿತು ಎಂದು ನಾನು ತಕ್ಷಣ ವ್ಯವಸ್ಥಾಪಕರಿಗೆ ತಿಳಿಸಿದ್ದೇನೆ. ನನ್ನ ಬಟ್ಟೆಗಳು, ಶೂಗಳು ಮತ್ತು ಬ್ಯಾಗ್ ಮೂತ್ರದಲ್ಲಿ ತೊಯ್ದಿದ್ದವು. ಬ್ಯಾಗ್‌ನಲ್ಲಿ ನನ್ನ ಪಾಸ್‌ಪೋರ್ಟ್, ಪ್ರಯಾಣ ದಾಖಲೆಗಳು ಮತ್ತು ಕರೆನ್ಸಿ ಇತ್ತು. ವಿಮಾನ ಸಿಬ್ಬಂದಿ ಅವುಗಳನ್ನು ಮುಟ್ಟಲು ನಿರಾಕರಿಸಿದರು. ನನ್ನ ಬ್ಯಾಗ್ ಮತ್ತು ಶೂಗಳಿಗೆ ಸೋಂಕುನಿವಾರಕ ಸಿಂಪಡಿಸಿದರು ಮತ್ತು ನನ್ನನ್ನು ಬಾತ್ರೂಮ್ಗೆ ಕರೆದೊಯ್ದು ನನಗೆ ಏರ್ಲೈನ್ಸ್ ಪೈಜಾಮ ಮತ್ತು ಸಾಕ್ಸ್ಗಳನ್ನು ನೀಡಿದರು. ನಾನು ಸಿಬ್ಬಂದಿಗೆ ಸೀಟು ಬದಲಾಯಿಸಲು ಕೇಳಿದೆ. ಆದರೆ ಬೇರೆ ಯಾವುದೇ ಸೀಟುಗಳು ಲಭ್ಯವಿಲ್ಲ ಎಂದು ಹೇಳಿದರು. ನನ್ನ ಅವಸ್ಥೆಯನ್ನು ಕಂಡ ಇನ್ನೊಬ್ಬ ಪ್ರಯಾಣಿಕರು ಪ್ರಥಮ ದರ್ಜೆಯಲ್ಲಿ ಸೀಟುಗಳು ಲಭ್ಯವಿವೆ ಎಂದು ನನ್ನ ಪರವಾಗಿ ಮಾತನಾಡಿದರು’’ ಎಂದು ಸಂತ್ರಸ್ತೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com