ರಾಹುಲ್ ಗಾಂಧಿ
ರಾಹುಲ್ ಗಾಂಧಿ

ಕೊನೆ ಹಂತಕ್ಕೆ ತಲುಪಿದ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ: ದೇಶದ ಜನತೆಗೆ ಪತ್ರ ಬರೆದ ರಾಹುಲ್ ಗಾಂಧಿ ಏನು ಹೇಳಿದ್ದಾರೆ?

ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಮುಂದಿನ ವಾರ ಜಮ್ಮು-ಕಾಶ್ಮೀರವನ್ನು ಪ್ರವೇಶಿಸಲಿದೆ. ಕಳೆದ ಮೂರೂವರೆ ತಿಂಗಳಿನಿಂದ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿಯವರು ಈ ಹೊತ್ತಿನಲ್ಲಿ ದೇಶದ ಜನರಲ್ಲಿ ನಿರಾಶೆಯ ಭಾವನೆ ಕಾಡುತ್ತಿದೆ ಎಂದಿದ್ದಾರೆ.

ನವದೆಹಲಿ: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಕೊನೆಯ ಹಂತಕ್ಕೆ ತಲುಪಿದೆ. ಮುಂದಿನ ವಾರ ಜಮ್ಮು-ಕಾಶ್ಮೀರವನ್ನು ಪ್ರವೇಶಿಸಲಿದೆ. ಕಳೆದ ಮೂರೂವರೆ ತಿಂಗಳಿನಿಂದ ಭಾರತ್ ಜೋಡೋ ಯಾತ್ರೆಯ ನೇತೃತ್ವ ವಹಿಸಿರುವ ರಾಹುಲ್ ಗಾಂಧಿಯವರು ಈ ಹೊತ್ತಿನಲ್ಲಿ ದೇಶದ ಜನರಲ್ಲಿ ನಿರಾಶೆಯ ಭಾವನೆ ಕಾಡುತ್ತಿದೆ ಎಂದಿದ್ದಾರೆ.

ಯಾತ್ರೆಯ ತಮ್ಮ ಅನುಭವವನ್ನು ಹಂಚಿಕೊಂಡ ಅವರು, ನಮ್ಮ ದೇಶದ ಬಹುತ್ವ ವ್ಯವಸ್ಥೆಯು ಅಪಾಯದಲ್ಲಿದೆ. ವಿಭಜಕ ಶಕ್ತಿಗಳು ನಮ್ಮ ವೈವಿಧ್ಯತೆಯನ್ನು ನಮ್ಮ ವಿರುದ್ಧ ತಿರುಗಿಸಲು ಪ್ರಯತ್ನಿಸುತ್ತಿವೆ. ವಿವಿಧ ಧರ್ಮಗಳು, ಸಮುದಾಯಗಳು ಮತ್ತು ಪ್ರದೇಶಗಳು ಪರಸ್ಪರ ವಿರುದ್ಧವಾಗಿ ಪೈಪೋಟಿಗಿಳಿದಿವೆ ಎಂದಿದ್ದಾರೆ.

ನಿನ್ನೆ ದೇಶದ ಜನರನ್ನುದ್ದೇಶಿಸಿ ಪತ್ರ ಬರೆದಿರುವ ಅವರು, ಸಾಮಾಜಿಕ ಪಿಡುಗುಗಳನ್ನು ಹೊಡೆದೋಡಿಸಲು ಬೀದಿಯಿಂದ ಸಂಸತ್ತುವರೆಗೆ ಪ್ರತಿದಿನ ಹೋರಾಟ ಮಾಡುತ್ತೇನೆ. ಕೇವಲ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಇರುವ ಈ ಶಕ್ತಿಗಳಿಗೆ ಗೊತ್ತು, ಜನರು ಅಭದ್ರತೆ ಮತ್ತು ಭಯವನ್ನು ಅನುಭವಿಸಿದಾಗ ಮಾತ್ರ ಅವರು 'ಇತರರ' ಬಗ್ಗೆ ದ್ವೇಷದ ಬೀಜಗಳನ್ನು ಬಿತ್ತಬಹುದು. ಭಾರತ್ ಜೋಡೋ ಯಾತ್ರೆಯಿಂದಾಗಿ ಈ ಕೆಟ್ಟ ಅಜೆಂಡಾವು ಅದರ ಮಿತಿಗಳನ್ನು ಹೊಂದಿದೆ, ಇಲ್ಲಿಂದ ಮೀರಿ ಮುಂದೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ನಿಮ್ಮ ಕಥೆಗಳನ್ನು ನನ್ನ ಯಾತ್ರೆಯ ಹಾದಿಯುದ್ದಕ್ಕೂ ಕೇಳಿದ್ದೇನೆ. ದೇಶದ ಜನರು ಉದ್ಯೋಗ ಕಳೆದುಕೊಳ್ಳುವ ಭಯ ಹೊಂದಿದ್ದಾರೆ. ಜನರ ಆದಾಯ ಮತ್ತಷ್ಟು ಕುಸಿಯುತ್ತಿದೆ. ಉತ್ತಮ ಭವಿಷ್ಯದ ಅವರ ಕನಸು ನುಚ್ಚುನೂರಾಗುತ್ತಿದೆ. ಯುವಜನತೆಯಲ್ಲಿ ನಿರುದ್ಯೋಗ ಸಮಸ್ಯೆಯಿದೆ, ಬೆಲೆ ಹೆಚ್ಚಳವಾಗುತ್ತಿದೆ. ರೈತರಿಗೆ ಬೆಳೆ ಕೈಕೊಡುತ್ತಿದೆ. ದೇಶದ ಸಂಪತ್ತು ಕಾರ್ಪೊರೇಟ್ ಜಗತ್ತಿನ ಕೈಯಲ್ಲಿದೆ ಎಂದು ರಾಹುಲ್ ಗಾಂಧಿ ಪತ್ರದಲ್ಲಿ ಬರೆದಿದ್ದಾರೆ.

ದೇಶದ ಪ್ರತಿಯೊಬ್ಬರೂ ಆರ್ಥಿಕ ಸಮೃದ್ಧಿ ಹೊಂದುವತ್ತ ತಾನು ಮುಂದಿನ ದಿನಗಳಲ್ಲಿ ಕೆಲಸ ಮಾಡಲಿದ್ದೇನೆ. ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗಲು, ಯುವಕರಿಗೆ ಉದ್ಯೋಗ, ದೇಶದ ಸಂಪತ್ತು ಜನರಿಗೆ ಸಮಾನವಾಗಿ ಹಂಚಿಕೆಯಾಗಬೇಕೆಂದು, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳಿಗೆ ಪೂರಕ ವಾತಾವರಣ, ರೂಪಾಯಿ ಬೆಲೆ ಹೆಚ್ಚಳಕ್ಕೆ, ಇಂಧನ ಕೈಗೆಟಕುವ ದರದಲ್ಲಿ ದೊರಕುವಂತಾಗಲು, ಗ್ಯಾಸ್ ಸಿಲೆಂಡರ್ ಬೆಲೆ 500 ರೂಪಾಯಿಗೆ ಇಳಿಕೆಯಾಗಬೇಕೆಂಬುದು ತಮ್ಮ ಕನಸಾಗಿದ್ದು ಅಲ್ಲಿಯವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಪತ್ರದಲ್ಲಿ ರಾಹುಲ್ ಗಾಂಧಿ ಬರೆದಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com