ಅಯೋಧ್ಯೆ ರಾಮಮಂದಿರ ನಿರ್ಮಾಣ ಕೆಲಸ ಅರ್ಧದಷ್ಟಾಗಿದೆ, ಬರುವ ವರ್ಷ ಸಂಕ್ರಾಂತಿಗೆ ರಾಮನ ವಿಗ್ರಹ ಸಿದ್ಧ: ಟ್ರಸ್ಟ್ ಕಾರ್ಯದರ್ಶಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಅರ್ಧ ಹಂತ ತಲುಪಿದ್ದು ಗರ್ಭಗುಡಿಯಲ್ಲಿ ರಾಮ ದೇವರ ವಿಗ್ರಹ ಇಡುವ ಕೆಲಸ ಮುಂದಿನ ವರ್ಷ ಮಕರ ಸಂಕ್ರಾಂತಿ ವೇಳೆಗೆ ಸಿದ್ಧವಾಗಲಿದೆ ಎಂದು ರಾಮ ಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
Published: 14th January 2023 12:43 PM | Last Updated: 14th January 2023 12:43 PM | A+A A-

ರಾಮ ಮಂದಿರ ನಿರ್ಮಾಣ ಕಾರ್ಯ
ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಅರ್ಧ ಹಂತ ತಲುಪಿದ್ದು ಗರ್ಭಗುಡಿಯಲ್ಲಿ ರಾಮ ದೇವರ ವಿಗ್ರಹ ಇಡುವ ಕೆಲಸ ಮುಂದಿನ ವರ್ಷ ಮಕರ ಸಂಕ್ರಾಂತಿ ವೇಳೆಗೆ ಸಿದ್ಧವಾಗಲಿದೆ ಎಂದು ರಾಮ ಮಂದಿರ ಟ್ರಸ್ಟ್ ನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.
ಮುಂಜಾನೆ ಸೂರ್ಯೋದಯದ ಬೆಳಕಿನ ಕಿರಣಗಳು ಗರ್ಭಗುಡಿಯ ದೇವರ ವಿಗ್ರಹದ ಹಣೆಯ ಮೇಲೆ ಬೀಳುವಂತೆ ದೇವಾಲಯದ ಗರ್ಭಗುಡಿಯನ್ನು ವಿನ್ಯಾಸಗೊಳಿಸಲಾಗಿದೆ. ಇಂದು ದೇಶದ ನಾಗರಿಕರು ಮಕರ ಸಂಕ್ರಾಂತಿಯನ್ನು ಆಚರಿಸುತ್ತಿದ್ದಾರೆ. ಸೂರ್ಯ ದೇವನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ರಾಮ ಮಂದಿರ ನಿರ್ಮಾಣದ ಅರ್ಧ ಗುರಿಯನ್ನು ನಾವು ತಲುಪಿದ್ದೇವೆ.
ಸೂರ್ಯ ದೇವನು 2024ರಲ್ಲಿ ಮಕರ ರಾಶಿಯನ್ನು ಪ್ರವೇಶಿಸಿದಾಗ ರಾಮ ದೇವರು ಅಯೋಧ್ಯೆಯಲ್ಲಿ ಮೂಲ ಗರ್ಭಗುಡಿಯ ಸ್ಥಳದಲ್ಲಿ ನೆಲೆಸುತ್ತಾರೆ ಎಂದು ಅವರು ಹೇಳಿದರು.
ನೆಲಮಹಡಿಯಲ್ಲಿನ ಕೆಲಸ ಅರ್ಧದಷ್ಟಾಗಿದೆ. ಗರ್ಭಗುಡಿಯ ನೆಲಮಹಡಿ ಆಗಸ್ಟ್ ಗೆ ಪೂರ್ಣವಾಗುತ್ತದೆ. 21 ಅಡಿ ಎತ್ತರದ ದೇವಸ್ಥಾನದ ಮಹಡಿ ಈಗಾಗಲೇ ಪೂರ್ಣವಾಗಿದೆ. 11 ಅಡಿ ಎತ್ತರದಲ್ಲಿ ಕಲ್ಲುಗಳ ಪದರ ಹಾಕಲಾಗಿದೆ. ದೇವಾಲಯಕ್ಕಾಗಿ ಎಂಟು ಪದರಗಳ ಕಲ್ಲುಗಳನ್ನು ಕೆತ್ತಲಾಗಿದೆ ಮತ್ತು ದೇವಾಲಯದ ಅಡಿಪಾಯವನ್ನು ಬಲಪಡಿಸಲು ಸುತ್ತಲೂ 5-ಅಡಿ ಗ್ರಾನೈಟ್ ಕಲ್ಲುಗಳನ್ನು ಸ್ಥಾಪಿಸಲಾಗಿದೆ. ಗರ್ಭಗುಡಿಯ ನೆಲ ಅಂತಸ್ತು 170 ಕಂಬಗಳನ್ನು ಒಳಗೊಂಡಿರುತ್ತದೆ.
ಈ ಬಾರಿಯ ಮಕರ ಸಂಕ್ರಾಂತಿಯ ಒಂದು ದಿನ ಮೊದಲು, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿರ್ಮಾಣದ ಪ್ರಗತಿಯನ್ನು ವೀಕ್ಷಿಸಲು ಪತ್ರಕರ್ತರಿಗೆ ಪ್ರವೇಶವನ್ನು ನೀಡಲಾಗಿತ್ತು. ಸಂಬಂಧಪಟ್ಟ ಎಂಜಿನಿಯರ್‌ಗಳ ಪ್ರಕಾರ, ಮುಂದಿನ ಜನವರಿಯೊಳಗೆ ಗರ್ಭಗುಡಿ ಪೂರ್ಣಗೊಳ್ಳಲಿದೆ. ಇಬ್ಬರು ವಾಸ್ತುಶಿಲ್ಪಿಗಳು -- ಸಿಬಿ ಸೋಂಪುರ ಮತ್ತು ಜೈ ಕಾರ್ತಿಕ್ -- ದೇವಾಲಯದ ವಿನ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ. ಇದುವರೆಗೆ ಶೇ.45ಕ್ಕೂ ಹೆಚ್ಚು ಕಾಮಗಾರಿ ನಡೆದಿದೆ ಎಂದು ಪ್ರಾಜೆಕ್ಟ್ ಮ್ಯಾನೇಜರ್ ಜಗದೀಶ್ ಅಫ್ಲೆ ತಿಳಿಸಿದ್ದಾರೆ.